ತಲೆಗೆ 5 ಲ.ರೂ. ಬಹುಮಾನ ಹೊತ್ತಿದ್ದ ಪಾತಕಿ
ಬೆಂಗಳೂರು: ಬೆಂಗಳೂರಿನಲ್ಲಿರುವ ಇಸ್ರೇಲ್ ದೂತಾವಾಸ ಕಚೇರಿ ಮತ್ತು ದೇಶದ ವಿವಿಧ ನಗರಗಳಲ್ಲಿರುವ ವಿದೇಶಗಳ ರಾಯಭಾರ ಕಚೇರಿಗಳಲ್ಲಿ ಸ್ಫೋಟಕ್ಕೆ ಸಂಚು ಮಾಡಿದ್ದ ಪ್ರಮುಖ ಆರೋಪಿ ನೂರುದ್ದೀನ್ ಅಲಿಯಾಸ್ ರಫಿ ಎಂಬ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಮೈಸೂರಿನಲ್ಲಿ ಬಂಧಿಸಿದ್ದಾರೆ. ಸ್ಫೋಟಕ್ಕೆ ಸಂಚು ಹೂಡಿದ್ದ ಆರೋಪದಲ್ಲಿ ಬಂಧಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ನೂರುದ್ದೀನ್ ಬಳಿಕ ನಾಪತ್ತೆಯಾಗಿದ್ದ.
ವಿಚಾರಣೆಗೂ ಹಾಜರಾಗದೆ ನಾಪತ್ತೆಯಾದ ಕಾರಣ ಆತನನ್ನು ಚೆನ್ನೈ ನ್ಯಾಯಾಲಯ ಘೋಷಿತ ಅಪರಾಧಿ ಎಂದು ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಆತ ಮೈಸೂರಿನ ರಾಜೀವ್ ನಗರದಲ್ಲಿ ಅಡಗಿದ್ದಾನೆ ಎಂಬ ಸುಳಿವು ಎನ್‌ಐಎ ಅಧಿಕಾರಿಗಳಿಗೆ ದೊರೆತಿತ್ತು. ಎನ್‌ಐಎ ತಂಡ ಆತನನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ.
ನೂರುದ್ದೀನ್ ಪಾಕಿಸ್ಥಾನದ ಅಮಿರ್ ಜುಬೇಗ್ ಸಿದ್ದಿಕೆ ಮತ್ತು ಶ್ರೀಲಂಕಾದ ಮುಹಮ್ಮದ್ ಜೊತೆ ಸೇರಿಕೊಂಡು ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿ ಮತ್ತು ಬೆಂಗಳೂರಿನಲ್ಲಿರುವ ಇಸ್ರೇಲ್ ದೂತಾವಾಸ ಕಚೇರಿಯನ್ನು ಸ್ಪೋಟಿಸಲು 2014ರಲ್ಲಿ ಸಂಚು ರೂಪಿಸಿದ್ದ. ಈ ಕೃತ್ಯಕ್ಕೆ ಅಗತ್ಯವಾದ ಹಣವನ್ನು ನೂರುದ್ದೀನ್ ನಕಲಿ ನೋಟು ಚಲಾವಣೆಯ ಮೂಲಕ ನೀಡಿದ್ದ. ಈ ಪ್ರಕರಣದಲ್ಲಿ ಆತನ ಬಂಧನವಾಗಿ ಆತನ ವಿರುದ್ಧ ಬೇಹುಗಾರಿಕೆ ಪ್ರಕರಣ ದಾಖಲಿಸಲಾಗಿತ್ತು. ಆತನಿಗೆ 2023ರಲ್ಲಿ ಷರತ್ತಬದ್ಧ ಜಾಮೀನು ನೀಡಲಾಗಿತ್ತು. ಬಳಿಕ ಈತ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ಕುರಿತು ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
































































