ಕೃತಕ ಬುದ್ಧಿಮತ್ತೆ ಬಳಸಿದ ಅತ್ಯಾಧುನಿಕ ವ್ಯವಸ್ಥೆ ಅಳವಡಿಕೆ
ಮಂಗಳೂರು: ಮಂಗಳೂರು ನಗರ ಇನ್ಮುಂದೆ ಅತ್ಯಾಧುನಿಕ ಕ್ಯಾಮರಾ ಹಾಗೂ ರಾಡಾರ್ ಕಣ್ಗಾವಲಿಗೆ ಒಳಪಡಲಿದೆ. ನಗರದ ಆಯಕಟ್ಟಿನ ಪ್ರದೇಶಗಳ ಮೇಲೆ ರಾಡಾರ್ ಅಳವಡಿಸಲಾಗಿದ್ದು, ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ಇಗಾಮು ಹಾಕುವ ಸಲುವಾಗಿ ಕಣ್ಗಾವಲು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಇದಕ್ಕಾಗಿ ಸ್ಮಾರ್ಟ್ ನಗರದಲ್ಲಿ ಸ್ಮಾರ್ಟ್ ತಂತ್ರಜ್ಞಾನ ಜಾರಿಗೆ ತರಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಅತ್ಯಾಧುನಿಕ ಟ್ರಾಫಿಕ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ನಗರದ ಪ್ರಮುಖ ಜಂಕ್ಷನ್ಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಯಾಮರಾ ಹಾಗೂ ರೇಡಾರ್ ವ್ಯವಸ್ಥೆ ಅಳವಡಿಸಲಾಗಿದೆ.
ಈ ಮೂಲಕ ನಗರದ ರಸ್ತೆಗಳಲ್ಲಿ ನಡೆಯುವ ಅನುಮಾನಾಸ್ಪದ ಚುಟುವಟಿಕೆ ಮತ್ತು ವಾಹನ ಸಂಚಾರದ ಮೇಲೆ ಕಣ್ಗಾವಲು ಇಡಲಾಗುತ್ತಿದೆ. ಅತ್ಯಾಧುನಿಕ ಎ.ಐ ಕ್ಯಾಮರಾ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ, ಚಾಲನೆ ವೇಳೆ ಮೊಬೈಲ್ ಬಳಸಿದರೆ, ತ್ರಿಬಲ್ ರೈಡ್, ಸೀಟ್ ಬೆಲ್ಟ್ ಧರಿಸದಿದ್ದರೆ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಮೊಬೈಲ್ಗೆ ದಾಖಲೆ ಸಹಿತ ದಂಡದ ನೋಟಿಸ್ ಕಳುಹಿಸುತ್ತದೆ. ಜೊತೆಗೆ ಎಸ್.ಎಂ.ಎಸ್ ಸಂದೇಶವನ್ನು ರವಾನೆ ಮಾಡುತ್ತದೆ.
ಟ್ರಾಫಿಕ್ ನಿಯಮ ಉಲ್ಲಂಘನೆ ಅತ್ಯಾಧುನಿಕ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದು ಕಮಾಂಡ್ ಕಂಟ್ರೋಲ್ ರೂಂನಿಂದ ಪೊಲೀಸರಿಗೆ ರವಾನೆಯಾಗಿ, ತಕ್ಷಣವೇ ಸಂಚಾರಿ ಪೊಲೀಸರಿಂದ ನಿಯಮ ಉಲ್ಲಂಘಿಸಿದವರ ಮೊಬೈಲ್ಗೆ ನೋಟಿಸ್ ಹಾಗೂ ಎಸ್ಎಂಎಸ್ ರವಾನಿಸಲ್ಪಡಲಿದೆ. ಮಿತಿ ಮೀರಿದ ವೇಗದಲ್ಲಿ ಸಂಚರಿಸಿದರೆ ರಾಡಾರ್ನಿಂದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ ಫೋಟೋ ಸಹಿತ ದೂರು ದಾಖಲಾಗಲಿದೆ.

ಪ್ರಸ್ತುತ ಕಮಾಂಡ್ ಕಂಟ್ರೋಲ್ ಸೆಂಟರ್ನ ಎರಡನೇ ಹಂತದ ಕೆಲಸಗಳು ನಡೆಯುತ್ತಿದ್ದು, ಇದರದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಬ್ಯಾಕ್ ಆ್ಯಂಡ್ ಪ್ರೋಗ್ರಾಮಿಂಗ್ ಮೂಲಕ ಕಾರಿಡಾರ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ನಗರದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಣಗೊಳ್ಳಲಿದೆ.































































