ನಡುರಸ್ತೆಯಲ್ಲಿ ಎರಡು ತಂಡಗಳ ಗ್ಯಾಂಗ್‌ವಾರ್
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ನಿನ್ನೆ ಹಾಡಹಗಲೇ ಇಬ್ಬರು ರೌಡಿಗಳನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಈ ಘಟನೆ ರಾಜ್ಯದ ಕಾನೂನು ಮತ್ತು ವ್ಯವಸ್ಥೆ ಪಾಲನೆ ಎಷ್ಟು ಬಿಗಿಯಾಗಿದೆ ಎಂಬ ಪ್ರಶ್ನೆಯನ್ನು ಎಬ್ಬಿಸಿದೆ.
ನಡುರಸ್ತೆಯಲ್ಲೆ ಗ್ಯಾಂಗ್‌ವಾರ್ ನಡೆದಿದ್ದು, ಇಬ್ಬರು ರೌಡಿಶೀಟರ್‌ಗಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೈಕ್‌ನಲ್ಲಿ ಅಟ್ಟಿಸಿಕೊಂಡು ಬಂದು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಬಳಿಕ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.
ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಕೊಲೆ ನಡೆದಿದೆ. ಮಾರಕಾಸ್ತ್ರ, ಚಪ್ಪಡಿ ಕಲ್ಲು, ಸೈಕಲ್ ಎತ್ತಿ ಹಾಕಿ ಹತ್ಯೆಗೈದಿದ್ದು, ಹಳೆವೈಷಮ್ಯ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಹೆಬ್ ಅಲಿಯಾಸ್ ಸೇಬು ಮತ್ತು ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಬರ್ಬರವಾಗಿ ಕೊಲೆಯಾದವರು.
ಇನ್ನೊಂದು ಗ್ಯಾಂಗ್‌ನ ರೌಡಿಶೀಟರ್ ಯಾಸೀನ್ ಕುರೇಶಿ ಮೇಲೆ ಅಟ್ಯಾಕ್ ಮಾಡಿದ್ದು, ಚಾಕುವಿನಿಂದ ಇರಿದಿದ್ದಾರೆ. ಾತ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಶೋಹೆಬ್ ಅಲಿಯಾಸ್ ಸೇಬು ಮತ್ತು ಗೌಸ್ ಇಬ್ಬರೂ ಯಾಸೀನ್ ಮೇಲೆ ದಾಳಿ ಮಾಡಿದಾಗ ಪ್ರತಿದಾಳಿ ದಾಳಿ ನಡೆದಿದೆ. ಪ್ರತಿದಾಳಿ ವೇಳೆ ಸೇಬು ಮತ್ತು ಗೌಸ್ ಸ್ಥಳದಲ್ಲೇ ಬರ್ಬರವಾಗಿ ಹತ್ಯೆಗೀಡಾಗಿದ್ದಾರೆ.
ಕೊಲೆ ಮಾಡಿದ ಕುರೇಶಿ ಗ್ಯಾಂಗ್‌ನ ಯುವಕರು ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸ್ ಬೀಗಿ ಬಂದೋಬಸ್ತ್ ನಿಯೋಜಿಸಲಾಗಿದೆ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.
























