ನ್ಯಾಯಾಲಯದ ದಾವೆಗೂ ಈ ಕ್ರಮಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ
ಹೊಸದಿಲ್ಲಿ : ಕೋವಿಶೀಲ್ಡ್ ಲಸಿಕೆ ತಯಾರಕಾ ಕಂಪನಿ ಅಸ್ಟ್ರಾಜೆನೆಕಾ ಇದೀಗ ಪ್ರಪಂಚದಾದ್ಯಂತ ಔಷಧ ಮಾರುಕಟ್ಟೆಗಳಿಂದ ಲಸಿಕೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಕೋವಿಶೀಲ್ಡ್ ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದಾದ ಬಳಿಕ ಕಂಪನಿಯು ಈ ನಿರ್ಧಾರ ಮಾಡಿದೆ. ಆದರೆ ಲಸಿಕೆ ಹಿಂಪಡೆಯಲು ಕಂಪನಿ ಬೇರೆ ತಾಂತ್ರಿಕ ಕಾರಣವನ್ನು ನೀಡಿದೆ. ಸಾಂಕ್ರಾಮಿಕ ರೋಗಗಳ ಬಳಿಕ ಲಸಿಕೆಯ ಬೇಡಿಕೆ ಕಡಿಮೆಯಾಗಿದೆ. ಉತ್ಪಾದನೆ ಹಾಗೂ ಪೂರೈಕೆಯನ್ನು ಕೂಡ ಕಂಪನಿ ನಿಲ್ಲಿಸಿದೆ.
ಅಸ್ಟ್ರಾಜೆನೆಕಾ ಸ್ವೀಡಿಶ್ ಬಹುರಾಷ್ಟ್ರೀಯ ಔಷಧೀಯ ಮತ್ತು ಜೈವಿಕ ತಂತ್ರಜ್ಞಾನ ಕಂಪನಿಯಾಗಿದ್ದು, ಕೇಂಬ್ರಿಡ್ಜ್ ಬಯೋಮೆಡಿಕಲ್ ಕ್ಯಾಂಪಸ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಕಂಪನಿ ತನ್ನ ಕೋವಿಡ್ ಲಸಿಕೆಗಳನ್ನು ಪ್ರಪಂಚದಾದ್ಯಂತದ ಮಾರುಕಟ್ಟೆಗಳಿಂದ ಹಿಂಪಡೆಯುತ್ತಿದೆ. ಹೆಚ್ಚುವರಿಯಾಗಿ ಇದು ಯುರೋಪ್ನಲ್ಲಿ ಮಾರ್ಕೆಟಿಂಗ್ ಅನುಮೋದನೆಯನ್ನು ಹಿಂಪಡೆಯಲು ಯೋಜಿಸಿದೆ.
ಕೋವಿಶೀಲ್ಡ್ ಲಸಿಕೆ ಬಹಳ ಅಪರೂಪಕ್ಕೆ TTS ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗುತ್ತದೆ ಮತ್ತು ಮಾನವರಲ್ಲಿ ಕಡಿಮೆ ರಕ್ತದ ಪ್ಲೇಟ್ಲೆಟ್ ಕಾರಣವಾಗುತ್ತದೆ ಎಂದು ಬ್ರಿಟನ್ ನ್ಯಾಯಾಲಯದಲ್ಲಿ ಇತ್ತೀಚೆಗೆ ಕಂಪನಿ ಒಪ್ಪಿಕೊಂಡ ಬಳಿಕ ಲಸಿಕೆಯ ಬಗ್ಗೆ ನಾನಾ ಅನುಮಾನಗಳು ವ್ಯಕ್ತವಾಗಿವೆ. ಬ್ರಿಟನ್ನಲ್ಲಿ ಎಂಭವಿಸಿದ 81ಕ್ಕೂ ಹೆಚ್ಚು ಸಾವುಗಳಿಗೆ ಲಸಿಕೆ ಪರೋಕ್ಷ ಕಾರಣ ಎಂಉ ಆರೋಪ ಕೇಳಿಬಂದಿತ್ತು. ಆದರೆ ಕೋವಿಶೀಲ್ಡ್ ಅನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನ್ಯಾಯಾಲಯದ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ಅಸ್ಟ್ರಾಜೆನೆಕಾ ಸ್ಪಷ್ಟಪಡಿಸಿದೆ.

ಬ್ರಿಟಿಷ್ ಹೈಕೋರ್ಟ್ನಲ್ಲಿ ಸಲ್ಲಿಸಿದ ದಾಖಲೆಗಳ ಪ್ರಕಾರ ಕಂಪನಿಯು ತನ್ನ ಕೊರೊನಾ ಲಸಿಕೆ ಥ್ರಂಬೋಸಿಸ್, ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು, ಇದು ತೀವ್ರತರವಾದ ಪ್ರಕರಣಗಳಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಿತ್ತು.































































