ಚುನಾವಣೆಯಲ್ಲಿ ಅಕ್ರಮ ಹಣ ಬಳಕೆ ಅನುಮಾನದ ಮೇಲೆ ಕಾರ್ಯಾಚರಣೆ
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಕಾವು ಬಿರುಸಾಗಿತ್ತಿರುವಂತೆಯೇ ಆದಾಯ ಕರ ಇಲಾಖೆಯ ಕಾರ್ಯಾಚರಣೆಯೂ ಚುರುಕುಗೊಂಡಿದೆ. ಬೆಂಗಳೂರಿನಲ್ಲಿ ಹತ್ತಕ್ಕೂ ಹೆಚ್ಚು ಕಡೆ ಶುಕ್ರವಾರ ಬೆಳಗ್ಗೆ ಐಟಿ ಅಧಿಕಾರಿಗಳು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಚುನಾವಣೆಗೆ ಹಣ ಸಾಗಾಟ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಲಾಗಿದೆ.
ಉದ್ಯಮಿಗಳು, ರಿಯಲ್ ಎಸ್ಟೇಟ್ ಕುಳಗಳು ಮತ್ತಿತರರ ಮೂಲಕ ಚುನಾವಣೆಗೆ ಹಣ ತೊಡಗಿಸುವ ಕಾರ್ಯ ಕರ್ನಾಟಕದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಇಂದಿನ ದಾಳಿ ನಡೆದಿದೆ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಜತೆ ಗರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳು ನೆಲಮಂಗಲದಲ್ಲಿ ದಾಳಿ ಮಾಡಿದ್ದರು. 6 ಕಾರುಗಳಲ್ಲಿ ಬಂದ 20 ಐಟಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿತ್ತು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ಆಪ್ತ ಕನಕಪುರ ಕೆಂಪರಾಜು ಮನೆ ಮೇಲೆ ಕೂಡ ಕೆಲವು ದಿನಗಳ ಹಿಂದೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಡಿ.ಕೆ ಸುರೇಶ್ ಅವರ ಮತ್ತೊಬ್ಬ ಆಪ್ತನ ಮನೆ ಮೇಲೆ ಬೆಂಗಳೂರಿನ ವಾಜರಹಳ್ಳಿಯಲ್ಲಿ ಐಟಿ ದಾಳಿ ನಡೆದಿತ್ತು.
ಧಾರವಾಡದ ದಾಸನಕೊಪ್ಪ ಕ್ರಾಸ್ ಬಳಿಯ ಅರ್ನಾ ರೆಸಿಡೆನ್ಸಿಯ ಮೂರನೇ ಮಹಡಿಯಲ್ಲಿರುವ ಬಸವರಾಜ್ ದತ್ತನವರ್ ಎನ್ನುವರ ಪ್ಲಾಟ್ ನಂ 303ರ ನಿವಾಸದ ಮೇಲೆ ಮಂಗಳವಾರ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ಬರೋಬ್ಬರಿ 18 ಕೋಟಿ ರೂ. ನಗದು ವಶಕ್ಕೆ ಪಡೆದುಕೊಂಡಿದ್ದರು.































































