ಗನ್ ಹಿಡಿದುಕೊಂಡು ಸಿಎಂಗೆ ಹಾರಾರ್ಪಣೆ

ಕಾರ್ಕಳ : ಬೈರಸಂದ್ರದಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಿಯಾಜ್ ಸೊಂಟದಲ್ಲಿ ಗನ್ ಇಟ್ಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹಾರಾರ್ಪಣೆ ಮಾಡಿರುವುದು ಭದ್ರತಾ ಲೋಪವಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸಮರ್ಥಿಸಿರುವುದು ಕಾಂಗ್ರೆಸ್ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾರ್ಕಳ ತಾಲೂಕು ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ವಾಗ್ದಾಳಿ ಮಾಡಿದರು.

ಅವಶ್ಯಕತೆ ಇತ್ತೇ..?
ಜೀವಬೆದರಿಕೆ ಇರುವವರಿಗೆ ಗನ್ ಹೊಂದಲು ಅವಕಾಶವಿದೆ. ಆದರೆ ಗನ್ ಬಳಕೆ ಮಾಡಲು ಅನುಮತಿಸುವ ಸಂದರ್ಭದಲ್ಲಿ ಗೃಹ ಇಲಾಖೆ ಬಳಕೆದಾರರಿಗೆ ಕಾನೂನಿನಡಿಯಲ್ಲಿ ನೀಡಿದ ಶರತ್ತುಗಳನ್ನು ಅವರು ಪಾಲಿಸಬೇಕಾಗಿರುತ್ತದೆ. ಕಾನೂನಿನನ್ವಯ ಯಾವುದೇ ಮಾರಕಾಯುಧಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ. ಪ್ರದರ್ಶಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಜನಸಾಮಾನ್ಯರಿಗೆ ಕಾಣುವ ರೀತಿಯಲ್ಲಿ ಗನ್ ಇಟ್ಟುಕೊಂಡು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದು ಕೂಡಾ ಪ್ರದರ್ಶನವಾಗುತ್ತದೆ. ಆ ಕಾರಣ ಪೋಲೀಸರು ಸ್ವಯಂ ಪ್ರೇರಿತರಾಗಿ ಕೇಸ್ ದಾಖಲಿಸಬೇಕಾಗಿತ್ತು. ಜೀವ ಬೆದರಿಕೆ ಇದೆ ಎಂದು ಹೇಳುವ ವ್ಯಕ್ತಿ ಗನ್ ಹಿಡಿದುಕೊಂಡು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಅವಶ್ಯಕತೆ ಇತ್ತೇ..? ಎಂದು ರವೀಂದ್ರ ಮೊಯ್ಲಿ ಪ್ರಶ್ನಿಸಿದರು.

ನೈತಿಕ ಅಧಪತನದ ಸಂಕೇತ
ಈ ಹಿಂದೆ ಶಿವಮೊಗ್ಗ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ತಲವಾರು ಪ್ರದರ್ಶನ ಮಾಡಿದ ರೀತಿಯಲ್ಲಿಯೇ ಈ ಘಟನೆ ನಡೆದಿದೆ. ಉತ್ತರ ಭಾರತದ ಕೆಲವೊಂದು ರಾಜ್ಯಗಳಲ್ಲಿ ಈ ಹಿಂದೆ ಈ ರೀತಿಯ ದೃಶ್ಯ ಕಾಣ ಸಿಗುತ್ತಿದ್ದು. ಇದೀಗ ಶಾಂತಿಯ ನಾಡು ಕರ್ನಾಟಕಕ್ಕೂ ಬಂದಿರುವುದು ಕಾಂಗ್ರೆಸಿನ ಆಡಳಿತದ ಪರಿಣಾಮ. ಇದು ಆಘಾತಕಾರಿಯಾದ ವಿಷಯ. ಈ ಹಿಂದೆ ತಪ್ಪುಗಳು ನಡೆದಾಗ ಅದನ್ನು ಖಂಡಿಸುವ ಬದಲು ಒಂದು ಸಮುದಾಯವನ್ನು ಓಲೈಸುವ ಸಲುವಾಗಿ they are my brothers ಎಂದವರಿಂದ ಮತ್ತೇನು ನಿರೀಕ್ಷಿಸಬಹುದು. ಈ ಘಟನೆಯನ್ನೂ ಸಮರ್ಥಿಸುವುದು ಕಾಂಗ್ರೆಸಿನ ನೈತಿಕ ಅಧಪತನದ ಸಂಕೇತ ಎಂದು ರವೀಂದ್ರ ಮೊಯ್ಲಿ ಕಿಡಿಕಾರಿದರು.

ಸೋಲಿನ ಭೀತಿಯಿಂದ ಕಂಗೆಟ್ಟ ಕಾಂಗ್ರೆಸ್ ಜನರನ್ನು ಮತ್ತಷ್ಟೂ ಭಯಭೀತರನ್ನಾಗಿಸಿ ಮತಗಳಿಸುವ ತಂತ್ರ ಇದಾಗಿದ್ದು, ಚುನಾವಣಾ ಆಯೋಗ ಈ ಬಗ್ಗೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ರವೀಂದ್ರ ಮೊಯ್ಲಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.









































































































error: Content is protected !!
Scroll to Top