ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ – ಸುಮಲತಾ ಸ್ಪಷ್ಟನೆ

ಮಂಡ್ಯ : ಮಂಡ್ಯದಲ್ಲಿಂದು ಬೆಂಬಲಿಗರ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, ಹಠಕ್ಕೆ ಬಿದ್ದು ನಾನು ಈ ಬಾರಿ ಪಕ್ಷೇತರಳಾಗಿ ಸ್ಪರ್ಧೆ ಮಾಡುವುದಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗೆ ನನ್ನ ಬೆಂಬಲ ನೀಡುತ್ತೇನೆ. ಕಾಂಗ್ರೆಸ್ ಪಕ್ಷ ಸೇರುವುದಿಲ್ಲ. ಆದರೆ ರಾಜಕೀಯ ಬಿಟ್ಟು ಹೋಗಲ್ಲ. ಇವತ್ತಿನ ದಿನ ಮೋದಿ ಅವರು ದೇಶದ ಬಗ್ಗೆ ಹೊಂದಿರುವ ಕನಸಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ನನ್ನ ಎಂಪಿ ಸ್ಥಾನವನ್ನು ಬಿಟ್ಟು ಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೀನಿ ಎಂದು ಘೋಷಿಸಿದರು.

ಸಕ್ಕರೆ ನಾಡು ಮಂಡ್ಯ ಬಿಟ್ಟು ಬೇರೆ ಕಡೆ ನನ್ನ ರಾಜಕೀಯ ಜೀವನವಿಲ್ಲ, ಮಂಡ್ಯ ಮಣ್ಣಿನ ಸೊಸೆಯಾಗಿ ಜಿಲ್ಲೆಯ ಜನರ ಕೈಬಿಡಲು ನಾನು ಇಷ್ಟಪಡುವುದಿಲ್ಲ. ಈ ಮಂಡ್ಯದ ಋಣ ಮತ್ತು ಈ ಮಂಡ್ಯದ ಜನರನ್ನು ನಾನು ಎಂದೆಂದಿಗೂ ಬಿಡುವುದಿಲ್ಲ ಎಂದು ನಿಮ್ಮ ಮುಂದೆ ಇಂದು ಪ್ರಮಾಣ ಮಾಡಿ ಹೇಳುತ್ತೇನೆ ಎಂದರು.

ನಾನು ಗೌರವ ಇರದ ಕಡೆ ಹೋಗಲ್ಲ, ಕಾಂಗ್ರೆಸ್ ನಾಯಕರು ನನ್ನ ಬಗ್ಗೆ ಏನೆಲ್ಲಾ ಮಾತನಾಡಿದ್ದಾರೆ ಎಂದು ನೀವೆಲ್ಲಾ ನೋಡಿರುತ್ತೀರಿ, ಗೌರವ ಇಲ್ಲದ ಕಡೆ ನಾನ್ಯಾಕೆ ಹೋಗಲಿ ಎಂದು ತಿರುಗೇಟು ಕೊಟ್ಟ ಸುಮಲತಾ ಈ ಮೂಲಕ ಕಳೆದ ಮೂರ್ನಾಲ್ಕು ತಿಂಗಳಿನಿಂದ ಕೇಳಿಬರುತ್ತಿದ್ದ ಎಲ್ಲಾ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಏ. 6ರಂದು ಬಿಜೆಪಿ ಸೇರ್ಪಡೆ
ಈ ದೇಶದ ಭವಿಷ್ಯದ ಚುಕ್ಕಾಣಿ ಹಿಡಿಯುವಲ್ಲಿ ಪ್ರಧಾನಿ ಮೋದಿ ಸಮರ್ಥರು ಎಂದು ನಾನು ಅಂದುಕೊಳ್ಳುತ್ತಿದ್ದೇನೆ. ಮೋದಿಯವರು ಇಡೀ ವಿಶ್ವವೇ ಮೆಚ್ಚಿಕೊಂಡ ನಾಯಕ. ಅವರಲ್ಲಿ ಸ್ವಾರ್ಥ ರಾಜಕೀಯವಲ್ಲ, ಸ್ವತಂತ್ರ ಸಂಸದೆಯಾಗಿದ್ದ ನನಗೆ ಮಂಡ್ಯ ಜಿಲ್ಲೆಯ ಕೆಲಸ ಮಾಡಲು ಅನುದಾನ ಬಿಡುಗಡೆ ಮಾಡಲು ಬಿಜೆಪಿ ಸರ್ಕಾರ ಸಹಾಯ ಮಾಡಿದೆ. ಆದ್ದರಿಂದ ಬಿಜೆಪಿಗೆ ಸೇರಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಕೆಲಸ ಮಾಡಲು ಏಪ್ರಿಲ್ 6ರಂದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ಘೋಷಿಸಿದರು.











































































error: Content is protected !!
Scroll to Top