ಮಗಳು, ಅಳಿಯನಿಂದಲೇ ಉದ್ಯಮಿಯ ಪತ್ನಿಗೆ 13 ಕೋ. ರೂ. ವಂಚನೆ

ಉದ್ಯಮಿಯ ನಕಲಿ ಸಹಿ ಬಳಸಿ, ಫೋರ್ಜರಿ ದಾಖಲೆಪತ್ರಗಳ ಮೂಲಕ ಷೇರುಗಳ ವರ್ಗಾವಣೆ

ಕಾರ್ಕಳ : ಮಗಳು ಮತ್ತು ಅಳಿಯ ಸೇರಿ ತಂದೆಯ ನಕಲಿ ಸಹಿ ಬಳಸಿ, ದಾಖಲೆಗಳನ್ನು ಫೋರ್ಜರಿ ಮಾಡಿ ಷೇರುಗಳನ್ನು ವರ್ಗಾಯಿಸಿ ಸುಮಾರು 13 ಕೋ ರೂ. ವಂಚನೆ ಎಸಗಿದ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಕುರಿತು ಸಾಣೂರು ಗ್ರಾಮದ ದಿವಂಗತ ಗಣೇಶ ಎಂಬವರ ಪತ್ನಿ ವೀಣಾ ದೂರು ದಾಖಲಿಸಿದ್ದಾರೆ. ಗಣೇಶ ಅವರು ಅಳಿಯ ಶುಕ್ಲಂಬರ ಅವರನ್ನು ಆದರ್ಶ ಇಂಡಸ್ರ್ಟಿಯಲ್ ಕೆಮಿಕಲ್‌ನ ಪಾಲುದಾರರನ್ನಾಗಿ ಮತ್ತು ಕೊನೆಯ ಮಗಳು ಅಶ್ವಿನಿಯನ್ನು ಸಾಣೂರು ಕ್ಯಾಶ್ಯೂಸ್‌ನ ಪಾಲುದಾರರನ್ನಾಗಿ ಮಾಡಿ ಶೇ.51 ಮತ್ತು ಶೇ.49 ಪಾಲು ಒಪ್ಪಂದದಂತೆ ವ್ಯವಹಾರ ನಡೆಸುತ್ತಿದ್ದರು. 2021ರಲ್ಲಿ ಗಣೇಶ ಅವರ ಆರೋಗ್ಯ ಸಮಸ್ಯೆಯಿಂದಾಗಿ ವ್ಯವಹಾರಗಳ ಕಡೆಗೆ ಕಡಿಮೆ ಗಮನ ಹರಿಸುತ್ತಿದ್ದರು. ಈ ಸಮಯದಲ್ಲಿ ಆರೋಪಿ ಶುಕ್ಲಂಬರ ಅವರು ಸಿಎ ಗಿರಿಧರ ಮತ್ತು ನಾಮದೇವ ಎಂಬವರೊಂದಿಗೆ ಸೇರಿಕೊಂಡು ಕಚೇರಿಯ ವ್ಯವಹಾರವನ್ನು ಅವರ ಹಿಡಿತಕ್ಕೆ ಪಡೆದುಕೊಂಡಿರುತ್ತಾರೆ.


ಮಗಳು ಅಶ್ವಿನಿ, ಅಳಿಯ ಶುಕ್ಲಂಬರ, ಸಿಎ ಗಿರಿಧರ ಮತ್ತು ಖಾಸಗಿ ಕನ್ಸಲ್ಟೆಂಟ್ ನಾಮದೇವ ಸೇರಿಕೊಂಡು 2019ರ ನಂತರ ಆದರ್ಶ ಇಂಡಸ್ಟ್ರಿಯಲ್ ಕೆಮಿಕಲ್ ಮತ್ತು ಸಾಣೂರು ಕ್ಯಾಶ್ಯೂಸ್ ಇದರ ನಕಲಿ ಪಾರ್ಟನರ್‌ಶಿಪ್ ಡೀಡ್‌ ತಯಾರಿಸಿ ವೀಣಾ ಅವರ ನಕಲಿ ಸಹಿಗಳನ್ನು ಮಾಡಿ ವೀಣಾರ ಷೇರುಗಳನ್ನು ಕಡಿಮೆಗೊಳಿಸಿ ಅಶ್ವಿನಿ ಮತ್ತು ಶುಕ್ಲಂಬರ ಅವರ ಷೇರುಗಳನ್ನು ಹೆಚ್ಚಿಸಿಕೊಂಡಿರುತ್ತಾರೆ.


ಈ ನಾಲ್ಕು ಮಂದಿ ಅಪಾದಿತರು ದೀಪಾ ಎಕ್ಸಿಕ್ಯೂಟಿವ್ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಇವರೊಂದಿಗೆ ಸೇರಿಕೊಂಡು ವೀಣಾ ಮತ್ತು ಅವರ ಗಂಡನ ಜಂಟಿ ಡಿಮ್ಯಾಟ್ ಅಕೌಂಟ್‌ನ ಷೇರುಗಳನ್ನು ವೀಣಾ ಅವರಿಗೆ ತಿಳಿಯದಂತೆ ಸಹಿಗಳನ್ನು ನಕಲು ಮಾಡಿ 12,86,91,121 ರೂ. ಮೊತ್ತದ ಷೇರುಗಳನ್ನು ಶುಕ್ಲಂಬರ ಮತ್ತು ಅಶ್ವಿನಿ ಅವರ ಖಾತೆಗಳಿಗೆ ಹಾಗೂ ಗಣೇಶ ಇವರ ಜಂಟಿ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಗಣೇಶ್ 12-3-2024ರಂದು ಮೃತಪಟ್ಟಿದ್ದು, ಆ ಬಳಿಕ ಈ ಮೋಸದ ವ್ಯವಹಾರ ವೀಣಾರ ಗಮನಕ್ಕೆ ಬಂದಿದೆ. ವೀಣಾ ಜಂಟಿ ಖಾತೆಯ ದಾಖಲೆ ಪತ್ರ ಕೇಳಿದಾಗ ಆರೋಪಿಗಳು ನೀಡಲು ನಿರಾಕರಿಸಿದ್ದಾರೆ. ವೀಣಾ ದಾಖಲಿಸಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.































































































































error: Content is protected !!
Scroll to Top