ಆರೋಪಿ ಪೊಲೀಸ್ ಎನ್ಕೌಂಟರ್ಗೆ ಬಲಿ
ಲಖನೌ : ಕ್ಷೌರಿಕನೊಬ್ಬ ತನ್ನ ನೆರೆಮನೆಯ ಇಬ್ಬರು ಪುಟ್ಟ ಮಕ್ಕಳನ್ನು ಕತ್ತು ಸೀಳಿ ಕೊಂದು ಇನ್ನೊಂದು ಮಗುವನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಉತ್ತರ ಪ್ರದೇಶದ ಬದಾಯೂಂ ಜಿಲ್ಲೆಯಲ್ಲಿ ಸಂಭವಿಸಿದೆ. ಪಾತಕಿ ಕ್ಷೌರಿಕನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ.
ಆರೋಪಿಯನ್ನು ಸಾಜಿದ್ (22) ಎಂದು ಗುರುತಿಸಲಾಗಿದ್ದು, 11 ಹಾಗೂ 6 ವರ್ಷದ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿ, ಮತ್ತೊಬ್ಬನನ್ನು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಬದಾಯೂಂ ಜಿಲ್ಲೆಯ ಮಂಡಿ ಸಮಿತಿ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಹತ್ಯೆಯಾದ ಮಕ್ಕಳ ತಂದೆ ವಿನೋದ್ ಕುಮಾರ್ ಮನೆಯ ಬಳಿಯೇ ಕ್ಷೌರದಂಗಡಿ ಹೊಂದಿದ್ದಾರೆ. ನಿನ್ನೆ ಅವರ ಹೆಂಡತಿಯೂ ಅಂಗಡಿಯಲ್ಲಿದ್ದ ವೇಳೆ ಸಾಜಿದ್ ಯಾರಿಗೂ ತಿಳಿಯದಂತೆ ಮನಗೆ ನುಗ್ಗಿ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಮಕ್ಕಳ ಕಿರುಚಾಟ ಕೇಳಿ ಅಕ್ಕಪಕ್ಕದವರು ಬರುವಷ್ಟರಲ್ಲಿ ಪರಾರಿಯಾಗಿದ್ದಾನೆ. ಪೊಲೀಸರು ಅವನನ್ನು ಹುಡುಕಿ ಎನ್‌ಕೌಂಟರ್ ಮಾಡಿದ್ದಾರೆ. ಆರೋಪಿಯು ತನ್ನ ನೆರೆಯ ವಿನೋದ್ ಕುಮಾರ್ ಕುಟುಂಬದೊಂದಿಗೆ ಆಗಾಗ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ.
ಹತ್ಯೆಯಾದ ಆಯುಷ್, ಪಿಯೂಷ್ ಅವಳಿ ಮಕ್ಕಳಾಗಿದ್ದು, ಗಂಭಿರವಾಗಿ ಗಾಯಗೊಂಡಿರುವ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ಘಟನೆ ಬಳಿಕ ಮೃತದೇಹಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಅಂಬ್ಯಲೆನ್ಸ್ ಅನ್ನು ಸ್ಥಳೀಯರು ವಾಪಸ್ ಕಳುಹಿಸಿದ್ದಾರೆ. ಕೊನೆಗೆ ಹೆಚ್ಚಿನ ಪೊಲೀಸ್ ಪಡೆ ಕರೆತಂದು ಜನರ ಮನವೊಲಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.









































