ಫೋಟೋಗ್ರಾಫರ್‌ಗೆ ಎಂಪಿ ಟಿಕೆಟ್‌ ದೊರೆತಿರುವುದು ಅಭಿಮಾನದ ಸಂಗತಿ – ಪದ್ಮಪ್ರಸಾದ್‌ ಜೈನ್‌

ಉಡುಪಿ : ಫೋಟೋಗ್ರಾಫರ್‌ ಓರ್ವರು ಲೋಕಸಭಾ ಸ್ಥಾನಕ್ಕೆ ಅಭ್ಯರ್ಥಿಯಾಗಿರುವುದು ವೃತ್ತಿ ಬಾಂಧವರಾದ ನಮಗೆ ಅತ್ಯಂತ ಸಂತಸದ ಸಂಗತಿ ಎಂದು ಸೌತ್‌ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌ ಅಭಿಪ್ರಾಯಪಟ್ಟರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಓರ್ವ ಸಾಮಾನ್ಯ ಫೋಟೋಗ್ರಾಫರ್‌ ಕೂಡ ಆಡಳಿತ ವ್ಯವಸ್ಥೆಯ ಉನ್ನತ ಸ್ಥಾನ ಪಡೆಯಬಹುದು ಎಂಬುದಕ್ಕೆ ಕೋಟ ಶ್ರೀನಿವಾಸ ಪೂಜಾರಿ ಅವರೇ ನಿದರ್ಶನ. ಕೋಟದಲ್ಲಿ ಸ್ವಾತಿ ಸ್ಟುಡಿಯೋ ಹೊಂದಿದ್ದ ಶ್ರೀನಿವಾಸ ಪೂಜಾರಿ ಅವರು ಛಾಯಾಚಿತ್ರಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದವರು. ಸ್ಥಳೀಯ ಸಮಸ್ಯೆಗಳ ಕುರಿತು ಬೆಳಕು ಹರಿಸುವ ಲೇಖನಗಳನ್ನು ಪ್ರಕಟಿಸುವ ಮೂಲಕ ಆಡಳಿತ ವ್ಯವಸ್ಥೆ, ಅಧಿಕಾರಿಗಳ ಗಮನ ಸೆಳೆದವರು. ಸ್ವಪ್ರಯತ್ನ, ನಿರಂತರ ಪರಿಶ್ರಮ, ಬದ್ಧತೆ, ಕಾರ್ಯತತ್ಪರತೆ, ಪ್ರಾಮಾಣಿಕತೆ ಮೂಲಕವೇ ಹಂತ ಹಂತವಾಗಿ ಬೆಳೆದವರು ಎಂದು ಪದ್ಮಪ್ರಸಾದ್‌ ಅವರು ಬಣ್ಣಿಸಿದರು.

ಗ್ರಾಮ ಪಂಚಾಯತ್‌ನಿಂದ ಸಂಸತ್ತಿನತ್ತ
ಗ್ರಾಮ ಪಂಚಾಯತ್‌ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ ಅವರು ಬಳಿಕ ತಾ.ಪಂ., ಜಿ.ಪಂ., ವಿಧಾನ ಪರಿಷತ್‌ ಸದಸ್ಯರಾಗಿ, ಸಚಿವರಾಗಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕರಾಗಿ ತನ್ನ ಹುದ್ದೆಗೆ ಒಂದಿಷ್ಟೂ ಚ್ಯುತಿ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಿದವರು. ಪಂಚಾಯತ್‌ ರಾಜ್‌ ವ್ಯವಸ್ಥೆ ಕುರಿತು ಆಳವಾದ ಜ್ಞಾನ ಹೊಂದಿದ್ದ ಕೋಟ ಅವರು ಪಂಚಾಯತ್‌ಗಳ ಸುಧಾರಣೆಗಾಗಿ ಸಾಕಷ್ಟು ಯೋಜನೆ ರೂಪಿಸಿದರು. ತನಗೆ ದೊರೆತ ಎಲ್ಲ ಅವಕಾಶ, ಹುದ್ದೆಗಳನ್ನು ಸಮರ್ಥವಾಗಿ ಸದ್ಬಳಕೆ ಮಾಡಿರುವ ಕೋಟ ಅವರು ತನ್ನ ನೈಜ ಸರಳತೆ, ಸಜ್ಜನಿಕೆ ಮತ್ತು ವಿನಯಶೀಲ, ಕ್ರಿಯಾಶೀಲ ಗುಣಗಳಿಂದಲೇ ಜನಮಾನಸದಲ್ಲಿ ಸ್ಥಾನ ಪಡೆದವರು ಎಂದು ಪದ್ಮಪ್ರಸಾದ್‌ ತಿಳಿಸಿದರು.

ಅಹಂ ಇಲ್ಲದ ವ್ಯಕ್ತಿತ್ವ
ಕೋಟ ಶ್ರೀನಿವಾಸ್‌ ಪೂಜಾರಿ ಅವರ ಬಳಿ ಅಧಿಕಾರದ ಅಹಂ ಸುಳಿಯಲಿಲ್ಲ. ಅವಿವೇಕದ ಮಾತು ಆಡಿದವರಲ್ಲ. ಭ್ರಷ್ಟಾಚಾರದ ಆರೋಪ ಎದುರಿಸಿದವರಲ್ಲ. ಇಂತಹ ಮೇರು ವ್ಯಕ್ತಿತ್ವದ ಓರ್ವ ರಾಜಕಾರಣಿಯು ನಮ್ಮ ವೃತ್ತಿ ಬಾಂಧವರು ಎನ್ನುವ ಅಭಿಮಾನದೊಂದಿಗೆ ಅವರ ಸಾಧನೆ ಬಗ್ಗೆ ನಮಗೆ ಹೆಮ್ಮೆಯಿದೆ. ನಾವು ಅವರಿಗೆ ಉಜ್ವಲ ರಾಜಕೀಯ ಭವಿಷ್ಯ ಹಾರೈಸುತ್ತೇವೆ ಎಂದು ಪದ್ಮಪ್ರಸಾದ್‌ ಜೈನ್‌ ಹರ್ಷ ವ್ಯಕ್ತಪಡಿಸಿದರು.















































error: Content is protected !!
Scroll to Top