ಅನುಮತಿ ನೀಡಬಾರದು ಎಂದು ಪೊಲೀಸರಿಗೆ ಮನವಿ
ಮಂಗಳೂರು : ಹೋಳಿ ಹಬ್ಬದ ಹೆಸರಿನಲ್ಲಿ ಡಿಜೆ ಹಾಕಿ ಕುಣಿಯುವುದು, ಅನೈತಿಕ ಚಟುವಟಿಕೆಗಳನ್ನು ನಡೆಸುವುದು ಮತ್ತು ಡ್ರಗ್ಸ್ ಮತ್ತಿತರ ಅಮಲು ಪದಾರ್ಥಗಳನ್ನು ಬಳಸುವುದನ್ನು ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಆಕ್ಷೇಪಿಸಿದ್ದು, ಇಂಥವರ ಮೇಲೆ ಕಣ್ಣಿಡುವುದಾಗಿ ಎಚ್ಚರಿಸಿದೆ.
ಹೋಳಿ ಹೆಸರಲ್ಲಿ ಅನೈತಿಕ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರಲಾರದು ಎಂದು ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ಎಚ್ಚರಿಕೆ ನೀಡಿದ್ದಾರೆ. ಹೋಳಿ ಎನ್ನುವುದು ಮಹತ್ವಪೂರ್ಣ ಆಚರಣೆ. ಅದಕ್ಕೆ ಅದರದ್ದೇ ಆದ ಧಾರ್ಮಿಕ ಹಿನ್ನೆಲೆ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹೋಳಿ ಹಬ್ಬದ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಸಲಾಗುತ್ತಿದೆ. ಕರಾವಳಿ ಭಾಗದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಹೋಳಿ ಹೆಸರಿನಲ್ಲಿ ಗಾಂಜಾ, ಡ್ರಗ್ಸ್, ಅಫೀಮು ಪೂರೈಸಲಾಗುತ್ತಿದೆ. ಯುವ ಸಮುದಾಯವನ್ನ ತಪ್ಪು ಹಾದಿಗೆಳೆಯುವ ಕೃತ್ಯ ಎಸಗಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಈ ಬಗ್ಗೆ ಈಗಾಗಲೇ ಪೊಲೀಸ್ ಇಲಾಖೆಗೆ ಬಜರಂಗದಳ ಮನವಿ ಮಾಡಿದೆ. ಅದನ್ನೂ ಮೀರಿ ಕಾರ್ಯಕ್ರಮ ಆಯೋಜಿಸಿದರೆ ನೇರ ಪರಿಣಾಮವನ್ನು ಸಂಘಟಕರು ಅನುಭವಿಸಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ವಿಹಿಂಪ ಪೊಲೀಸರಿಗೆ ಮನವಿ
ಹೋಳಿ ಹಬ್ಬದ ಸಂದರ್ಭದಲ್ಲಿ ಡಿಜೆ ಪಾರ್ಟಿ ಆಯೋಜಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ಸಹ ಮಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದು, ಅಂಥ ಚಟುವಟಿಕೆಗಳಿಗೆ ಅನುಮತಿ ನೀಡದಂತೆ ಮನವಿ ಮಾಡಿದೆ.

ವಿಶ್ವದಾದ್ಯಂತ ಹಿಂದೂಗಳು ಅನಾದಿಕಾಲದಿಂದಲೂ ಹೋಳಿ ಆಚರಿಸಿಕೊಂಡು ಬರುತ್ತಿದ್ದಾರೆ. ಹಿಂದೂ ಧಾರ್ಮಿಕ ಕಾರ್ಯಕ್ರಮದ ಹೆಸರಿನಲ್ಲಿ ಮಾದಕ ದ್ರವ್ಯ ಸೇವಿಸಿ, ಡಿಜೆ ಪಾರ್ಟಿ ಆಯೋಜಿಸುವುದು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತದೆ. ಇಂತಹ ಡಿಜೆ ಪಾರ್ಟಿಗಳಲ್ಲಿ ಡ್ರಗ್ಸ್ ಉಪಯೋಗಿಸುತ್ತಿರುವ ಸಂಶಯವಿದ್ದು, ಇಂತಹ ಡಿಜೆ ಪಾರ್ಟಿಗಳು ಯುವಕ ಯುವತಿಯರನ್ನು ದಾರಿತಪ್ಪಿಸುತ್ತವೆ. ಸಾಮಾಜಿಕ ಸ್ಯಾಸ್ಥ್ಯ ಕೆಡಿಸುವ ಇಂಥ ಪಾರ್ಟಿಗಳು ಕೋಮುಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಬಹುದು. ಇಂತಹ ಡಿಜೆ ಪಾರ್ಟಿಗಳಿಗೆ ಅನುಮತಿ ನೀಡಬಾರದು ಎಂದು ವಿಶ್ವ ಹಿಂದೂ ಪರಿಷತ್ ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ವಿನಂತಿಸಿದೆ.





























































