ಸಿದ್ದರಾಮಯ್ಯ ನಿಂದನೆಗೆ ಕಾಂಗ್ರೆಸ್ನವರು ಗರಂ
ಉಡುಪಿ: ಕಾಂಗ್ರೆಸ್‌ನ ಉಚಿತ ಗ್ಯಾರಂಟಿ ಯೋಜನೆಗಳ ಜೊತೆ ಬಾಂಬ್ ಕೂಡ ಉಚಿತವಾಗಿ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ನಿಂದಿಸಿ ಅವಹೇಳನಕಾರಿ ಪದ ಬಳಕೆ ಮಾಡಿ ವೀಡಿಯೋ ವೈರಲ್ ಮಾಡಿದ ಉಡುಪಿ ಗರಡಿ ಮಜಲು ನಿವಾಸಿ ದಿವಾಕರ್ ಕೋಟ್ಯಾನ್ ಎಂಬವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವಾಕರ್ ಕೋಟ್ಯಾನ್ ವೀಡಿಯೋದಲ್ಲಿ, ‘ಬಸ್ ಟಿಕೆಟ್ 2000ರೂ., ವಿದ್ಯುತ್ ಬಿಲ್ ಫ್ರೀ ಜೊತೆಗೆ ಈಗ ಹೊಸದಾಗಿ ಬಾಂಬ್ ಸ್ಫೋಟ ಫ್ರೀ ಕೂಡ ರಾಜ್ಯ ಸರಕಾರ ಕೊಡುತ್ತಿದೆ. ಇದಕ್ಕೂ ಹಣ ಕೊಡಲು ಇಲ್ಲ. ಎಲ್ಲವೂ ಫ್ರೀ. ನೇರವಾಗಿ ಮೇಲೆ…ನೋ ಪಾಸ್‌ಪೋರ್ಟ್ ನೋ ವೀಸಾ.. ಸನ್ಮಾನ್ಯ ಮುಖ್ಯಮಂತ್ರಿ ಸಿದ್ರುಲ್ಲಾಖಾನ್… ಹಿಂದುಗಳೇ ಫ್ರೀ ಬೇಕಲ್ಲ ತೆಗೆದುಕೊಳ್ಳಿ,..ಮುಂದೆ ಇನ್ನು ಆರು ತಿಂಗಳಿಗೆ ಬಸ್, ವಿದ್ಯುತ್, 2000ರೂ. ಜೊತೆ ಬಾಂಬ್ ಕೂಡ ಫ್ರೀ ಸಿಗುತ್ತದೆ. ಮಜಾ ಮಾಡಿ ಎಂದು ಹೇಳಿದ್ದಾರೆ.
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ದಿವಾಕರ್ ಕೋಟ್ಯಾನ್ ರಾಜ್ಯ ಸರಕಾರದ ಯೋಜನೆಗಳ ಜೊತೆ ಬಾಂಬ್ ಉಚಿತ ಹೇಳುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ್ದು, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹಮ್ಮದ್ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.















































