6 ಟ್ರಂಕ್‌ಗಳಲ್ಲಿ ತಮಿಳುನಾಡಿಗೆ ಹೋಗಲಿದೆ ಜಯಲಲಿತಾ ಒಡವೆ

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡಿಗೆ ಹಿಂದಿರುಗಿಸಲು ದಿನಾಂಕ ನಿಗದಿ ಮಾಡಲಾಗಿದ್ದು, ಆರು ಟ್ರಂಕ್‌ಗಳನ್ನು ತರಲು ತಮಿಳುನಾಡಿನ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬೆಂಗಳೂರಿನ ವಿಶೇಷ ಕೋರ್ಟ್ 6 ಟ್ರಂಕ್‌ಗಳೊಂದಿಗೆ ಬೆಂಗಳೂರಿಗೆ ಬರುವಂತೆ ತಮಿಳುನಾಡಿನ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕರ್ನಾಟಕದ ಮೇಲುಕೋಟೆಯಲ್ಲಿ ಜನಿಸಿದ್ದ ಜಯಲಲಿತಾ ಅವರು ಆದಾಯ ಮೀರಿದ‌ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಜೈಲಿನಲ್ಲಿದ್ದರು. ವಿಚಾರಣೆ ಅಂಗವಾಗಿ ಜಯಲಲಿತಾರಿಂದ ವಶಕ್ಕೆ ಪಡೆದಿದ್ದ ಆಭರಣ, ಸೀರೆ ಮತ್ತಿತರ ವಸ್ತುಗಳೂ ಬೆಂಗಳೂರಿನ ಕೋರ್ಟ್ ವಶದಲ್ಲಿ ಇದ್ದವು.‌ ಇದೀಗ ಈ ಆಭರಣಗಳನ್ನು ತಮಿಳುನಾಡು ಸರಕಾರಕ್ಕೆ ಹಿಂತಿರುಗಿಸಲು ಕೋರ್ಟ್ ನಿರ್ಧರಿಸಿದೆ. ಮಾರ್ಚ್ 6 ಮತ್ತು 7ರಂದು ತಮಿಳುನಾಡು ಸರ್ಕಾರಕ್ಕೆ‌ ಒಡವೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಒಡವೆ ಸ್ವೀಕರಿಸಲು ತಮಿಳುನಾಡು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ಐಜಿಪಿ ವಿಜಿಲೆನ್ಸ್ ಹಾಜರಿರಬೇಕು ಎಂದು ವಿಶೇಷ ನ್ಯಾಯಾಧೀಶ ಮೋಹನ್ ಸೂಚನೆ ನೀಡಿದ್ದಾರೆ.‌ ಒಡವೆ ಮತ್ತಿತರ ಜಯಲಲಿತಾರ ವಸ್ತುಗಳನ್ನು ಒಯ್ಯಲು 6 ಟ್ರಂಕ್‌ಗಳನ್ನು ತರಬೇಕು, ಜತೆಗೆ ವಿಡಿಯೋಗ್ರಾಫರ್, ಫೋಟೋಗ್ರಾಫರ್ ಇರಬೇಕು ಎಂದು ನ್ಯಾಯಾಲಯ ಹೇಳಿದೆ.

7 ಕೆ.ಜಿ.ಯಷ್ಟಿರುವ 468 ಬಗೆಯ ಚಿನ್ನ ಹಾಗೂ ವಜ್ರ ಖಚಿತ ಆಭರಣಗಳು, 700 ಕೆ.ಜಿ. ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿ.ವಿ. ಸೆಟ್ , 8 ವಿಸಿಆರ್, 1 ವಿಡಿಯೋ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್, 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್​ಗಳನ್ನು ತೆಗೆದುಕೊಂಡು ಹೋಗಲು 6 ಟ್ರಂಕ್​ಗಳು ತಮಿಳುನಾಡಿನಿಂದ ಬೆಂಗಳೂರಿಗೆ ಬರಲಿವೆ.





































































































































error: Content is protected !!
Scroll to Top