ಟ್ರೆಂಡ್ ಸೆಟ್ಟಿಂಗ್ ಸಾಧನೆಗಳು ನೂರಾರು ಸಾಧಕರಿಗೆ ದಾರಿ ತೋರಿಸುತ್ತವೆ
1) ಏಕದಿನದ ಪಂದ್ಯಗಳು ಅಂತಾರಾಷ್ಟ್ರೀಯ ಮಾನ್ಯತೆ ಪಡೆದದ್ದು 1970ರ ದಶಕದಲ್ಲಿ. ಅಂತಹ ಪಂದ್ಯಗಳಲ್ಲಿ ಶತಕ ಬಾರಿಸುವುದೇ ಕಷ್ಟ ಎಂಬ ಮಾತಿತ್ತು. ಆದರೆ 2010ರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಡಬಲ್ ಸೆಂಚುರಿ ಹೊಡೆದಾಗ ಇಡೀ ಜಗತ್ತು ಅದನ್ನು ನಿಬ್ಬೆರಗಾಗಿ ನೋಡಿತ್ತು. ಆ ದಾಖಲೆ ಮುಂದೆ ಯಾರೂ ಮುರಿಯಲು ಸಾಧ್ಯವೇ ಇಲ್ಲ ಎಂಬ ಮಾತು ಬಂದಿತು. ಆದರೆ ಮುಂದೆ 14 ವರ್ಷಗಳಲ್ಲಿ 10 ಜನ ಡಬಲ್ ಸೆಂಚುರಿ ಹೊಡೆದರು. ರೋಹಿತ್ ಶರ್ಮಾ ಮೂರು ಬಾರಿ ಈ ವಿಕ್ರಮ ಸಾಧಿಸಿದರು. ಒಂದು ಟ್ರೆಂಡ್ ಸೆಟ್ಟಿಂಗ್ ಇನ್ನಿಂಗ್ಸ್ ಆ ರೀತಿಯ ಅಸಂಖ್ಯ ಸಾಧಕರಿಗೆ ದಾರಿ ತೋರಿಸಿತ್ತು.
2) ಟೆಸ್ಟ್ ಕ್ರಿಕೆಟಿನ ಒಂದು ಇನಿಂಗ್ಸ್ನಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಪಡೆಯೋದು ಅಂದ್ರೆ ಅಬ್ಬಬ್ಬಾ ಅದು ಸಾಧ್ಯನಾ? ಎಂದು ಕೇಳುವ ಕಾಲವೇ ಇತ್ತು. ಆದರೆ 1956ರಲ್ಲಿ ಇಂಗ್ಲೆಂಡಿನ ಸ್ಪಿನ್ ಬೌಲರ್ ಜಿಮ್ ಲೇಕರ್ ಹತ್ತಕ್ಕೆ ಹತ್ತು ವಿಕೆಟ್ ಪಡೆದಾಗ ಜನ ಅದ್ಭುತ… ಅದ್ಭುತ… ಅಂದರು. ಇನ್ನು ಯಾರೂ ಪಡೆಯಲು ಸಾಧ್ಯ ಇಲ್ಲ ಅಂದರು. ಆದರೆ ಮುಂದೆ ಭಾರತದ ಅನಿಲ್ ಕುಂಬ್ಳೆ ಪಾಕ್ ವಿರುದ್ಧ ಹತ್ತಕ್ಕೆ ಹತ್ತು ವಿಕೆಟ್ ಪಡೆದರು. ಅದೇ ರೀತಿ ಮುಂದೆ ನ್ಯೂಜಿಲ್ಯಾಂಡ್ ದೇಶದ ಯುವ ಬೌಲರ್ ಏಜಾಸ್ ಪಟೇಲ್ ಅದೇ ಸಾಧನೆ ರಿಪೀಟ್ ಮಾಡಿದಾಗ ಜನರು ಅದನ್ನು ಮಿರಾಕಲ್ ಅನ್ನಲಿಲ್ಲ. ಅದು ಸಾಧ್ಯ ಅಂದರು.

3) ಜಗತ್ತಿನ ಅತಿ ಎತ್ತರದ ಶಿಖರಗಳಲ್ಲಿ ಒಂದಾದ ಮೌಂಟ್ ಎವರೆಸ್ಟನ್ನು 1953ರಲ್ಲಿ ತೆನ್ಸಿಂಗ್ ನೋರ್ಗೆ ಮತ್ತು ಎಡ್ಮಂಡ್ ಹಿಲರಿ ಏರಿ ಮುಗಿಸಿದಾಗ ಜನ ಅದನ್ನು ಲ್ಯಾಂಡ್ ಮಾರ್ಕ್ ಸಾಧನೆ ಎಂದರು. ಆದರೆ ಮುಂದೆ ನೂರಾರು ಜನರು ಆ ಸಾಧನೆಯನ್ನು ಪೂರ್ತಿ ಮಾಡಿದರು. ತೆನ್ಸಿಂಗ್ ಸಾಧನೆಯು ಮುಂದೆ ನೂರಾರು ಅಂತಹ ಸಾಧಕರಿಗೆ ದಾರಿ ತೋರಿಸಿತು.

4) ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಇತಿಹಾಸದಲ್ಲಿ ಮೊದಲ ಬಾರಿಗೆ 625/625 ಅಂಕಗಳನ್ನು ಪಡೆದು ದಾಖಲೆ ಬರೆದವನು ಭದ್ರಾವತಿಯ ರಂಜನ್ (2016). ಆತ ರಾತ್ರಿ ಹಗಲು ಆಗುವುದರ ಒಳಗೆ ಲೆಜೆಂಡ್ ಆಗಿದ್ದನು. ಮುಂದೆ ಅದನ್ನು ಯಾರೂ ಈ ಸಾಧನೆ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಬಂದಿತ್ತು. ಆದರೆ ದಾಖಲೆಗಳು ಹೇಳುವ ಹಾಗೆ ಮುಂದೆ ಪ್ರತಿ ವರ್ಷ ಹತ್ತಾರು ಸಾಧಕರು ಆ ಸಾಧನೆಯನ್ನು ರಿಪೀಟ್ ಮಾಡಿದರು. ಈಗ ಆ ಸಾಧನೆ ಮಾಡಿದ ನೂರಾರು ಸಾಧಕರು ಕರ್ನಾಟಕದಲ್ಲಿ ಇದ್ದಾರೆ. ಈಗಲೂ ಗೆಲ್ಲುತ್ತಿದ್ದಾರೆ.
5) ಅರುವತ್ತರ ದಶಕದವರೆಗೂ ನೂರು ಮೀಟರ್ ಓಟವನ್ನು ಹತ್ತು ಸೆಕೆಂಡ್ ಒಳಗೆ ಓಡಿ ಮುಗಿಸುವುದು ಸಾಧ್ಯವೇ ಇಲ್ಲ ಅನ್ನುತ್ತಿದ್ದರು. ಆದರೆ 1968ರಲ್ಲಿ ಜಿಮ್ ಹೈನ್ಸ್ ಎಂಬ ಕ್ರೀಡಾಪಟು ಆ ದೂರವನ್ನು 9.98 ಸೆಕೆಂಡ್ಸ್ ಸಮಯದಲ್ಲಿ ಓಡಿ ಮುಗಿಸಿದಾಗ ಜನ ಅದು ಸಾಧ್ಯ ಎಂದು ನಂಬಲು ಆರಂಭ ಮಾಡಿದರು. ಮುಂದೆ ನೂರಾರು ಓಟಗಾರರು ಆ ದಾಖಲೆಯನ್ನು ಮುರಿದು ಮುಂದೆ ಹೋಗಿದ್ದಾರೆ.

6) ಯಾವುದೇ ವಿಶ್ವಮಟ್ಟದ ಕೂಟದಲ್ಲಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಹತ್ತಕ್ಕೆ ಹತ್ತು ಅಂಕ ಪಡೆಯುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆ ಇತ್ತು. ಆದರೆ 1976ರ ಒಲಿಂಪಿಕ್ಸ್ ಕೂಟದಲ್ಲಿ ರೊಮೇನಿಯಾದ ನಾಡಿಯಾ ಕೊಮೇನಿಸಿ ಜಿಮ್ನಾಸ್ಟಿಕ್ ವಿಭಾಗದಲ್ಲಿ ಮೊದಲ ಬಾರಿಗೆ ‘ಪರ್ಫೆಕ್ಟ್ ಟೆನ್ ‘ ಸ್ಕೋರ್ ಮಾಡಿ ಚಿನ್ನದ ಪದಕ ಗೆದ್ದರು. ಆಗ ಆಕೆಗೆ ಕೇವಲ 14 ವರ್ಷ ಅನ್ನೋದು ಕೂಡ ಅದ್ಭುತವೇ ಆಗಿತ್ತು. ಮುಂದೆ ಅದೇ ನಾಡಿಯಾ ಎರಡು ಬಾರಿ ಒಲಿಂಪಿಕ್ಸ್ ಕೂಟದಲ್ಲಿ ಪರ್ಫೆಕ್ಟ್ ಟೆನ್ ಸಾಧನೆ ಮಾಡಿದರು. ಅದರ ನಂತರ ಹತ್ತಾರು ಜಿಮ್ಮಾಸ್ಟ್ಗಳು ಆ ದಾಖಲೆಯನ್ನು ಬರೆದು ಪದಕ ಗೆದ್ದಿದ್ದಾರೆ. ಇನ್ನೂ ಗೆಲ್ಲುತ್ತಾ ಇದ್ದಾರೆ.
7) ಅಮೆರಿಕದ ಸೆಲೆಬ್ರಿಟಿ ಸ್ವಿಮ್ಮರ್ ಮೈಕೆಲ್ ಪೆಲ್ಪ್ ವಿವಿಧ ಒಲಿಂಪಿಕ್ ಕೂಟಗಳಲ್ಲಿ ಗೆದ್ದ ಪದಕಗಳ ಸಂಖ್ಯೆಯೇ 29. ಅದರಲ್ಲಿ ಚಿನ್ನದ ಪದಕಗಳ ಸಂಖ್ಯೆ 23. ಒಂದೇ ಒಲಿಂಪಿಕ್ ಕೂಟದಲ್ಲಿ ಆ ಚಿನ್ನದ ಮೀನು ಗೆದ್ದ ಪದಕಗಳ ಸಂಖ್ಯೆ ಎಂಟು ಅಂದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ. ಆದರೆ ಆತನೆ ಮಹಾನ್ ಎಂದು ನಾವು ಹೇಳುವಂತೆ ಇಲ್ಲ. ಯಾಕೆಂದರೆ ಆತನನ್ನು ಮೀರಿಸುವ ಇನ್ನೊಬ್ಬ ಸಾಧಕರು ಮುಂದೆ ಬರಬಹುದು.

ಭರತವಾಕ್ಯ
ಜಗತ್ತಿನ ಮಹಾ ಮಹಾ ಸಾಧಕರು ತಾವು ಸಾಧನೆ ಮಾಡುವುದು ಮಾತ್ರವಲ್ಲ ಮುಂದೆ ನೂರಾರು ಸಾಧಕರಿಗೆ ದಾರಿ ತೊಡಿಸುತ್ತಾರೆ. ಒಬ್ಬ ಕ್ರೀಡಾಪಟು ಇನ್ನೊಬ್ಬ ಕ್ರೀಡಾಪಟುವಿಗೆ ಬ್ಯಾಟನ್ ಕೊಟ್ಟು ಓಡಿಸಿದ ಹಾಗೆ ಇದು. ವಿಶ್ವ ಕೀರ್ತಿಯ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ 2023ರಲ್ಲಿ ನಿವೃತ್ತನಾದಾಗ ಯುವ ಆಟಗಾರ ಎಂಬಪ್ಪೆಯ ಹೆಗಲ ಮೇಲೆ ಕೈ ಇಟ್ಟು ತನ್ನ ಲೆಗೆಸಿಯನ್ನು ಹಸ್ತಾಂತರ ಮಾಡಿದ ಹಾಗೆ ಅದು. ಸಾಧಕರ ಸಾಧನೆಯ ದಾಹವು ಮುಗಿಯುವುದಿಲ್ಲ. ಹಾಗೆಯೇ ಲೆಜೆಂಡ್ಸ್ ಹುಟ್ಟುವುದು ನಿಲ್ಲುವುದಿಲ್ಲ.

































































