ಕ್ಷೇತ್ರದ ಆನೆಯ ಬಗ್ಗೆ ಭಾರಿ ಕುತೂಹಲ ಹೊಂದಿರುವ ವಿದೇಶಿಗರು
ಮಂಗಳೂರು: ಕಟೀಲು ಕ್ಷೇತ್ರದ ಆನೆ ಮಹಾಲಕ್ಷ್ಮಿಯನ್ನು ನೋಡಲು ದೂರದ ಸ್ವಿಜರ್‌ಲ್ಯಾಂಡ್ ದೇಶದಿಂದ ಇಬ್ಬರು ಪ್ರವಾಸಿಗರು ಬಂದಿದ್ದಾರೆ.
ಕಟೀಲಿನಲ್ಲಿ ದುರ್ಗಾಪರಮೇಶ್ವರಿ ದೇವಿಯ ಸಾನಿಧ್ಯದ ಜೊತೆಗೆ ಅಲ್ಲಿರುವ ಆನೆ ಮಹಾಲಕ್ಷ್ಮಿಯೂ ಬಹಳ ಪ್ರಸಿದ್ಧವಾಗಿದೆ. ಸಾಧು ಸ್ವಭಾವದ ಮಹಾಲಕ್ಷ್ಮಿ ಕ್ರಿಕೆಟ್, ಫುಟ್ಬಾಲ್ ಆಡುವ ವೀಡಿಯೋಗಳು ಸಖತ್ ವೈರಲ್ ಆಗಿವೆ. ಯೂಟ್ಯೂಬ್‌ನಲ್ಲಿ ಈ ವೀಡಿಯೊಗಳನ್ನು ನೋಡಿರುವ ಸ್ವಿಜರ್‌ಲ್ಯಾಂಡ್‌ನ ಕ್ಲಾಡಿಯೋ ಬ್ರಾಂಡ್ಲಿ ಮತ್ತು ಉರ್ಸ್ ಸೈಕಲ್ ಪರ್ಯಟನೆ ವೇಳೆ ಕಟೀಲಿಗೆ ಆಗಮಿಸಿದ್ದಾರೆ.
ಸೈಕಲ್‌ನಲ್ಲಿ ಇಪ್ಪತ್ತೆರಡು ರಾಷ್ಟ್ರಗಳನ್ನು ಸುತ್ತಿ ಇದೀಗ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಇವರು ಆಗಮಿಸಿದ್ದಾರೆ. ಇಪ್ಪತ್ತೆರಡರ ಹರೆಯದ ಕ್ಲಾಡಿಯೋ ತನ್ನ ಅಂಕಲ್ ಉರ್ಸ್ ಜೊತೆಗೆ ಸೈಕಲ್‌ನಲ್ಲಿ ಪ್ರಪಂಚ ಪರ್ಯಟನೆಯಲ್ಲಿದ್ದಾರೆ. ಕಳೆದ 2022ರ ಸೆಪ್ಟೆಂಬರ್ 7ರಂದು ಸ್ವಿಜರ್‌ಲ್ಯಾಂಡ್‌ನಿಂದ ಸೈಕಲ್ ಪ್ರಯಾಣ ಆರಂಭಿಸಿದ ಇವರು ಮಂಗೋಲಿಯಾ, ಮಧ್ಯ ಏಷ್ಯಾ, ಇರಾನ್, ಒಮಾನ್ ರಾಷ್ಟ್ರಗಳನ್ನು ಕ್ರಮಿಸಿ ಭಾರತಕ್ಕೆ ಬಂದಿದ್ದಾರೆ.
ಒಮಾನ್‌ನಿಂದ ಕೊಚ್ಚಿನ್‌ಗೆ ಆಗಮಿಸಿದ ಇವರು ಕಳೆದ ಎಂಟು ದಿನಗಳಿಂದ ಭಾರತ ಪ್ರವಾಸದಲ್ಲಿದ್ದು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆನೆ ಮಹಾಲಕ್ಷ್ಮಿಯನ್ನು ಕಾಣಲು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಗೂಗಲ್‌ನಲ್ಲಿ ಕಟೀಲಿನ ಬಗ್ಗೆ ಅರಿತಿರುವ ಇವರು, ಆನೆಯ ವಿಶೇಷತೆಗಳ ಬಗ್ಗೆ ಸ್ಥಳೀಯರಲ್ಲಿ ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಇಲ್ಲಿಂದ ಉತ್ತರ ಭಾರತದತ್ತ ಪ್ರಯಾಣಿಸಿ ನೇಪಾಳದ ಮೂಲಕ ಬೇರೆ ದೇಶಗಳಿಗೆ ಹೋಗಲಿದ್ದಾರೆ. ದೇಶದೊಳಗೆ ರೈಲಿನಲ್ಲಿ ಸಂಚರಿಸುವ ಇವರು ಬಳಿಕ ಸೈಕಲ್‌ನಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಮಂಗಳೂರಿನಲ್ಲಿ ಕರಾವಳಿಯ ಹಲವು ಭಾಗಗಳಿಗೆ ಭೇಟಿ ನೀಡಿ ಖುಷಿಪಟ್ಟಿದ್ದಾರೆ.































































