ಲೋಕಸಭಾ ಚುನಾವಣೆ : ದಕ್ಷಿಣ ಕನ್ನಡಕ್ಕೆ ಖಾದರ್‌ ಅಭ್ಯರ್ಥಿ ?

ಮಂಗಳೂರು: ಲೋಕಸಭೆ ಚುನಾವಣೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸುವವರು ಯಾರು ಎಂಬ ಕುರಿತು ಕಾಂಗ್ರೆಸ್‌ ಮತ್ತು ಬಿಜೆಪಿ ರಹಸ್ಯ ಕಾಯ್ದುಕೊಂಡಿವೆ. ದಿನಕ್ಕೊಬ್ಬರ ಹೆಸರು ಮುನ್ನೆಲೆಗೆ ಬಂದು ಚರ್ಚೆಯಾಗುತ್ತಿದೆ. ಇದೀಗ ಅನಿರೀಕ್ಷಿತ ಎಂಬಂತೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಹೆಸರು ಪ್ರಸ್ತಾಪವಾಗಿದೆ. ಒಂದೆಡೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಜಾತಿ ಲೆಕ್ಕಾಚಾರ ಹಾಕುತ್ತಿದ್ದರೆ, ಮತ್ತೊಂದೆಡೆ ಖಾದರ್ ಅವರನ್ನು ಕಣಕ್ಕಿಳಿಸಲು ತಯಾರಿ ನಡೆದಿದೆ ಎನ್ನಲಾಗುತ್ತಿದೆ. ಹಿಂದುತ್ವದ ಭದ್ರಕೋಟೆಯಲ್ಲಿ ಯು. ಟಿ. ಖಾದರ್ ಅವರನ್ನು ಕಣಕ್ಕಿಳಿಸುವ ಮೂಲಕ ಒಂದು ಪ್ರಯೋಗ ಮಾಡಲು ಕಾಂಗ್ರೆಸ್‌ ವರಿಷ್ಠರು ಚಿಂತಿಸುತ್ತಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಯು.ಟಿ. ಖಾದರ್ ಮುಸ್ಲಿಂ ಮತಗಳನ್ನು ಕ್ಲೀನ್‌ಸ್ವೀಪ್ ಮಾಡಬಹುದು. ಜತೆಗೆ ಸಾಕಷ್ಟು ಹಿಂದುಗಳ ಬೆಂಬಲವೂ ಅವರಿಗಿದೆ. ಇವೆರಡು ಒಟ್ಟಾದರೆ ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಸೋಲಿಸಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್ಸಿನದ್ದು. ಖಾದರ್‌ ಕರಾವಳಿಯಲ್ಲಿ ಧರ್ಮ ಭೇದವಿಲ್ಲದೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಮಸೀದಿಗೆ ಹೋದಷ್ಟೇ ಶ್ರದ್ಧೆಯಿಂದ ಹಿಂದುಗಳ ದೇವಸ್ಥಾನ, ದೈವಸ್ಥಾನಗಳಿಗೆ ಹೋಗುವುದು ಮಾತ್ರವಲ್ಲದೆ ಪೂಜೆ, ಕೋಲ ಇತ್ಯಾದಿಗಳನ್ನೂ ನೆರವೇರಿಸುತ್ತಾರೆ. ದೇವಸ್ಥಾನ, ದೈವಸ್ಥಾನಗಳಿಗೆ ನೆರವು ನೀಡಲೂ ಹಿಂಜರಿಯುವುದಿಲ್ಲ. ಮುಸ್ಲಿಮರ ಒಂದು ವರ್ಗ ಧಾರ್ಮಿಕ ಕಾರಣಗಳಿಗೆ ಖಾದರ್‌ ಅವರನ್ನು ದ್ವೇಷಿಸುತ್ತಿದ್ದರೂ ಇದೇ ವೇಳೆ ಹಿಂದುಗಳ ದೊಡ್ಡ ಬೆಂಬಲವೂ ಅವರಿಗೆ ಈ ನಡೆಗಳಿಂದ ಸಿಗುತ್ತಿದೆ. ಹೀಗಾಗಿ ಅವರನ್ನು ಈ ಸಲ ಕಣಕ್ಕಿಳಿಸಿ ಕಳೆದ ಎರಡು ದಶಕಗಳಿಂದ ಕೈಬಿಟ್ಟು ಹೋಗಿರುವ ಕ್ಷೇತ್ರವನ್ನು ಮರಳಿ ವಶಪಡಿಸಿಕೊಳ್ಳುವ ತಂತ್ರಗಾರಿಕೆಯನ್ನು ಕಾಂಗ್ರೆಸ್‌ ರೂಪಿಸಿದೆ.

ಜಾತ್ಯತೀತ ನಡೆಯಿಂದ ಖಾದರ್ ಅವರಿಗೆ ಎಲ್ಲ ರೀತಿಯ ಓಟ್ ಬ್ಯಾಂಕ್ ಸೆಳೆಯುವ ಶಕ್ತಿ ಇದೆ ಎಂಬುದು ಅವರ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಜತೆಗೆ, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೂ ಕ್ಷೇತ್ರದ ಜನತೆಯಲ್ಲಿದೆ. ಹೀಗಾಗಿ ಅವರ ಮೂಲಕ ಕರಾವಳಿ ಪ್ರದೇಶದಲ್ಲಿ ಮತ್ತೆ ಹಿಡಿತ ಸಾಧಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.
ಆದರೆ ಖಾದರ್‌ ಈ ಕೊಡುಗೆಯನ್ನು ಒಪ್ಪುತ್ತಾರೆಯೇ ಎಂಬುದರ ಮೇಲೆ ಮುಂದಿನ ರಾಜಕೀಯ ನಡೆಗಳು ನಿಂತಿವೆ. ಜನಪ್ರಿಯ ಶಾಸಕರಾಗಿದ್ದರೂ ಕಾಂಗ್ರೆಸ್‌ನ ಬಣ ರಾಜಕೀಯ ಪರಿಣಾಮವಾಗಿ ಅವರನ್ನು ಸ್ಫಿಕರ್‌ ಮಾಡಲಾಗಿದೆ. ಈ ಘನ ಹುದ್ದೆಯನ್ನು ಖಾದರ್‌ ಒಲ್ಲದ ಮನಸ್ಸಿನಿಂದ ಸ್ವೀಕರಿಸಿದ್ದಾರೆ, ಹೀಗಿರುವಾಗ ಶಾಸಕ ಸ್ಥಾನ ಬಿಟ್ಟುಕೊಡಲು ಅವರು ತಯಾರಾಗುವುದು ಅನುಮಾನ ಎನ್ನಲಾಗುತ್ತಿದೆ. ಹಿಂದೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದವರು ಖಾದರ್‌. ರಾಜ್ಯ ರಾಜಕಾರಣದಲ್ಲಿ ಅವರ ವರ್ಚಸ್ಸು ಉತ್ತಮವಾಗಿದೆ. ಇದೀಗ ಸ್ಪೀಕರ್ ಆಗಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತಮ್ಮ ರಾಜಕೀಯ ಖದರ್​ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ರಾಷ್ಟ್ರ ರಾಜಕೀಯಕ್ಕೆ ಧುಮುಕಲು ಅವರು ಮುಂದಾಗಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.







































error: Content is protected !!
Scroll to Top