ರಾಮನ ಆದರ್ಶ ಮಕ್ಕಳು ಮೈಗೂಡಿಸಿಕೊಳ್ಳುವಂತಾಗಲಿ ಬೆಳೆಸಿ – ಅರ್ಪಿತಾ ಪ್ರಶಾಂತ್ ಶೆಟ್ಟಿ
ಕಾರ್ಕಳ : ಅಮ್ಮ ದೇವರಿಗೆ ಸಮಾನ. ಸುಸಂಸ್ಕೃತ ವ್ಯಕ್ತಿ ನಿರ್ಮಾಣ ಅಮ್ಮನಿಂದ ಮಾತ್ರ ಸಾಧ್ಯ. ಮಕ್ಕಳಿಗೆ ರಾಮಾಯಣದ ಬಗ್ಗೆ ತಿಳಿಸಿ ಮಕ್ಕಳಲ್ಲಿ ರಾಮನ ಆದರ್ಶಗಳನ್ನು ಬಿತ್ತಬೇಕು. ಸುಸಂಸ್ಕಾರಯುತ ಬದುಕಿನ ಸಂದೇಶ ರಾಮಾಯಣದಲ್ಲಿದೆ. ರಾಮ ರಾಮ ಎನ್ನುವ ಪದ ಬಾಯಿ ಮಾತಿಗೆ ಸೀಮಿತವಾಗದೆ ಮನುಷ್ಯನ ಒಳಹೊಕ್ಕು ರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಮಣಿಪಾಲ ಸಮೂಹ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಜ. 27ರಂದು ನಡೆದ ಕುಕ್ಕುಂದೂರು ಫ್ರೆಂಡ್ಸ್ (ರಿ.) ಕುಕ್ಕುಂದೂರು – ಮುಂಬೈ ಇದರ 15ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಕುಕ್ಕುಂದೂರು ಫ್ರೆಂಡ್ಸ್ನ ಕಾರ್ಯ ಶ್ಲಾಘನೀಯ. ಇಂತಹ ಸಂಘ ಸಂಸ್ಥೆಗಳಿಗೆ ಜನ ಸಹಕಾರ ನೀಡಬೇಕು ಎಂದು ಹೇಳಿದರು.


ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶಂಕರನಾರಾಯಣ ಭಟ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬೈಲಡ್ಕ ಶಿವತಿಕೆರೆ ಬಾಲಾಜಿ ಕ್ಷೇತ್ರದ ಗುರುಸ್ವಾಮೀಜಿಯವರಾದ ಬಾಲಕೃಷ್ಣ ಹೆಗ್ಡೆ ದಿವ್ಯ ಉಪಸ್ಥಿತಿಯಲ್ಲಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಅಭಿನಂದಿಸಲಾಯಿತು.
ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕ ರಾಜೇಂದ್ರ ಕುಮಾರ್ ಬಳ್ಳಾಲ್, ಮುಂಬೈ ವಚನ ಹಾಸ್ಪಿಟಾಲಿಟಿ ಸರ್ವಿಸಸ್ನ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಎನ್. ರಾಜ್, ಉದ್ಯಮಿ ಕಮಲಾಕ್ಷ ನಾಯಕ್, ಕುಕ್ಕುಂದೂರು ಫ್ರೆಂಡ್ಸ್ ಗೌರವಾಧ್ಯಕ್ಷ ತ್ರಿವಿಕ್ರಮ ಕಿಣಿ, ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು ಅಧ್ಯಕ್ಷ ಸಂದೀಪ್ ಪೂಜಾರಿ, ಮುಂಬೈ ಅಧ್ಯಕ್ಷ ರವೀಂದ್ರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಸನ್ನ ಕುಕ್ಕುಂದೂರು ಸ್ವಾಗತಿಸಿದರು. ನಳಿನಿ ಎಸ್. ಸುವರ್ಣ ಕಾರ್ಯಕ್ರಮ ನಿರೂಪಿಸಿ, ಹರೀಶ್ ಸಾಲಿಯನ್ ವಂದಿಸಿದರು.































































