ಕಾರ್ಕಳ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ನೀಡುವ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕಾರ್ಕಳ ಜ್ಞಾನಸುಧ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನ್ವಿ ಹೆಚ್. ಅಂಚನ್ (8ನೇ ತರಗತಿ) ಆಯ್ಕೆಯಾಗಿದ್ದು, ಜ. 26ರಂದು ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ‍್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಿದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಸೇರಿದಂತೆ ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.
ಅನ್ವಿ ಯೋಗಾಸನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಲವು ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದಲ್ಲದೇ, ಶಾಲಾ ಶಿಕ್ಷಣ ಇಲಾಖೆ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ನಡೆಯುವ ಅಂತರ್ ಶಾಲಾ ಯೋಗಾಸನ ರಿಥಮಿಕ್ ವಿಭಾಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈಕೆ ಕ್ರೀಡಾ ಕ್ಷೇತ್ರವಲ್ಲದೆ ಬೇರೆ ಬೇರೆ ವಿಭಾಗಗಳಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಇತ್ತೀಚಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲಾ ಸಹಯೋಗದೊಂದಿಗೆ ಮಂಗಳೂರಿನ ಇನ್ವೆಂಜರ್ ಫೌಂಡೇಶನ್ ಕಟಪಾಡಿಯ ಸೃಷ್ಟಿ ಫೌಂಡೇಶನ್ ವತಿಯಿಂದ ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಬಾಲ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ.
ಅನ್ವಿ ಕಾರ್ಕಳ ಶಾಸಕರ ಆಪ್ತ ಸಹಾಯಕ ಹರೀಶ್ ಅಂಚನ್ ಹಾಗೂ ಸರಕಾರಿ ಪ್ರೌಢಶಾಲೆ ಚೌಕಿ ಅಂಗಡಿ ಮಾಳ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಹರೀಶ್ ಅಂಚನ್ ದಂಪತಿ ಪುತ್ರಿ. ತನ್ನ ಯೋಗಭ್ಯಾಸವನ್ನು ಸುದರ್ಶನ್ ಕಾರ್ಕಳ ಇವರಿಂದ ಪಡೆಯುತ್ತಿದ್ದು, ಯೋಗ ಗುರು ನರೇಂದ್ರ ಕಾಮತ್ ಅವರಿಂದ ಮಾರ್ಗದರ್ಶನ ಪಡೆದಿರುತ್ತಾಳೆ.
































































