ಲಕ್ಷದ್ವೀಪ ಫೋಟೊಶೂಟ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಬಳಿಕ ಕ್ರಮ
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವರಾದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಮಾಲ್ಡೀವ್ಸ್ ಸರ್ಕಾರ ಅಮಾನತುಗೊಳಿಸಿದೆ.
ಈ ವಿಷಯವನ್ನು ಭಾರತ ಅಧಿಕೃತವಾಗಿ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿಸಿತ್ತು. ಈ ಕುರಿತು ಮಾಲ್ಡೀವ್ಸ್ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಉಪ ಸಚಿವೆ ಮರಿಯಮ್ ಶಿಯುನಾ, ಉಪ ಸಚಿವ ಹಸನ್ ಜಿಹಾನ್ ಮತ್ತು ಉಪ ಸಚಿವ ಮಲ್ಶಾ ಅವರನ್ನು ಅಮಾನತುಗೊಳಿಸಿದೆ.
ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಹೊಸ ಸರ್ಕಾರದ ನಂತರ ಮಾಲ್ಡೀವ್ಸ್‌ನೊಂದಿಗಿನ ಭಾರತದ ಸಂಬಂಧ ಹದಗೆಟ್ಟಿತು. ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯ ವೇಳೆ ಹಂಚಿಕೊಂಡ ಕೆಲವು ಚಿತ್ರಗಳ ಮೇಲೆ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದಕ್ಕೆ ಪುಷ್ಟಿ ನೀಡಿದೆ.
ಲಕ್ಷದ್ವೀಪದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸಲುವಾಗಿಪ್ರಧಾನಿ ಇತ್ತೀಚೆಗೆ ಅಲ್ಲಿಗೆ ಭೇಟಿ ಬೀಚ್‌ನಲ್ಲಿ ಫೋಟೊಶೂಟ್ ಮಾಡಿಕೊಂಡಿದ್ದರು. ಈ ಭೇಟಿಯ ಚಿತ್ರ ಹಾಗು ವೀಡಿಯೊಗಳನ್ನು ಜಗತ್ತಿನಾದ್ಯಂತ ಕೋಟಿಗಟ್ಟಲೆ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜನ ಲಕ್ಷದ್ವೀಪವನ್ನು ಮಾಲ್ಡೀವ್ಸ್‌ನೊಂದಿಗೆ ಹೋಲಿಸಿ ಕಮೆಂಟ್ ಹಾಕಿದ್ದರು. ಇದರಿಂದ ಮಾಲ್ದೀವ್ಸ್ ಸರಕಾರಕ್ಕೆ ಉರಿ ಹತ್ತಿಕೊಮಡಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಪಕ್ಷದ ಸದಸ್ಯ ಜಾಹಿದ್ ರಮೀಜ್ ಅವರು ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಲೇವಡಿ ಮಾಡಿ ಚಿತ್ರಗಳ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
ಭಾರತ ಎಂದಿಗೂ ನಮಗೆ ಸಮಾನವಾಗಲು ಸಾಧ್ಯವಿಲ್ಲ. ಮಾಲ್ಡೀವ್ಸ್ ಪ್ರವಾಸಿಗರಿಗೆ ಒದಗಿಸುವ ಸೇವೆಯನ್ನು ಭಾರತ ಹೇಗೆ ಒದಗಿಸುತ್ತದೆ? ನಮ್ಮಂತೆ ಸ್ವಚ್ಛತೆ ಕಾಪಾಡಲು ಅವರು ಹೇಗೆ ಸಾಧ್ಯವಾಗುತ್ತದೆ? ಅವರ ಕೊಠಡಿಗಳಲ್ಲಿನ ವಾಸನೆಯೇ ಅವರಿಗೆ ಮತ್ತು ಪ್ರವಾಸಿಗರಿಗೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಬರೆದುಕೊಂಡಿದ್ದರು.
ಸಚಿವೆ ಮರ್ಯಾಮ್ ಶಿಯುನಾ ಕೂಡ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದು. ವಿರೋಧ ವ್ಯಕ್ತವಾಗುತ್ತಿದ್ದಂತೆ ಶಿಯುನಾ ತನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.































































