ಕಾರ್ಕಳ : ಉಡುಪಿ ಶೆಫಿನ್ಸ್ ಅಕಾಡೆಮಿಯ ವತಿಯಿಂದ ಯರ್ಲಪಾಡಿ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಡಿ. 19 ರಂದು ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.
ಶೆಫಿನ್ಸ್ ಅಕಾಡೆಮಿಯ ನಿರ್ದೇಶಕ ಮನೋಜ್ ಕಡಬ ಮಾತನಾಡಿ, ಕನ್ನಡ ಮಾಧ್ಯಮ ಉಳಿಸಿ ಆಂದೋಲನದಿಂದ ನಮ್ಮ ಧಾರ್ಮಿಕ ನಂಬಿಕೆಗಳು, ಸಂಸ್ಕೃತಿಗಳು ಉಳಿಯುತ್ತವೆ. ಸ್ಪೋಕನ್ ಇಂಗ್ಲೀಷ್‌ನಂತಹ ತರಬೇತಿಗಳ ಮೂಲಕ ಸರಕಾರಿ ಶಾಲೆಯಲ್ಲಿರುವ ಮಕ್ಕಳ ಇಂಗ್ಲೀಷ್ ಸಂವಹನದ ಕನಸನ್ನು ನನಸಾಗಿಸಬಹುದು. ತನ್ಮೂಲಕ ಹೆತ್ತವರ ಆರ್ಥಿಕ ಹೊರೆ ತಪ್ಪಿಸಬಹುದು ಮತ್ತು ಗಣನೀಯ ಪ್ರಮಾಣದಲ್ಲಿ ಶಾಲಾ ದಾಖಲಾತಿಯು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭ ದಾನಿಗಳ ಸಹಕಾರದಿಂದ 25 ಸಾ. ರೂ. ವೆಚ್ಚದ ಸ್ಪೋಕನ್ ಇಂಗ್ಲೀಷ್ ಕಲಿಕೆಗೆ ಬೇಕಾಗುವ ವರ್ಕ್ಬುಕ್ ಅನ್ನು ಶೆಫಿನ್ಸ್ ಅಕಾಡೆಮಿಯ ವತಿಯಿಂದ ಶಾಲೆಗೆ ನೀಡಲಾಯಿತು. ವಿದ್ಯಾರ್ಥಿಗಳು ಇಂಗ್ಲೀಷ್‌ನಲ್ಲಿ ಪ್ರಹಸನ ಪ್ರದರ್ಶಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಜಂಟಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ನರಂಗ ಕುಲಾಲ್ ಹಾಗೂ ದಿನೇಶ್ ಪೂಜಾರಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್, ಶೆಫಿನ್ಸ್ ಅಕಾಡೆಮಿಯ ಮುಖ್ಯಸ್ಥೆ ರ‍್ಲಿ ಮನೋಜ್, ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುನಂದ ಎಲ್.ಎಸ್. ಸ್ವಾಗತಿಸಿದರು. ಸೌಮ್ಯ ಕಾರ್ಯಕ್ರಮ ನಿರೂಪಿಸಿ, ಸುದರ್ಶಿನಿ ವಂದಿಸಿದರು.
ದಾನಿಗಳಿಗೆ ಸನ್ಮಾನ
ಶಾಲಾ ಅಂಗಳಕ್ಕೆ ಶೀಟ್ ಅಳವಡಿಕೆಗೆ 3,32,500 ರೂ. ಮೊತ್ತವನ್ನು ಕೊಡುಗೆ ನೀಡಿದ ನಿವೃತ್ತ ಲೆಕ್ಕ ಪರಿಶೋಧಕ ಕೆ. ಕಮಲಾಕ್ಷ ಕಾಮತ್ ಅವರನ್ನು ಶಾಲೆಯಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕಮಲಾಕ್ಷ ಕಾಮತ್, ಶೈಕ್ಷಣಿಕ ಚಟುವಟಿಕೆಯೊಂದಿಗೆ ಶಿಸ್ತು ಹಾಗೂ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಿ. ಹಾಗಾದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಿವೃತ್ತ ಮುಖ್ಯ ಶಿಕ್ಷಕ ಹಾಗೂ ಕರ್ವಾಲು ದೇವಸ್ಥಾನದ ಮೊಕ್ತೇಸರ ಅನಂತ ಪಟ್ಟಾಭಿ ರಾವ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಶೆಟ್ಟಿ ಮಂಜೋಲ್ ಗುತ್ತು, ಪ್ರೌಢ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನರಂಗ ಕುಲಾಲ್, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದಿನೇಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯ ಹರೀಶ್ ದೇವಾಡಿಗ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸುನಂದ ಎಲ್.ಎಸ್. ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸುರೇಶ್ ಕುಮಾರ್ ಉಪಸ್ಥಿತರಿದ್ದರು.


























