ಯಡಿಯೂರಪ್ಪನನ್ನು ಬಳಸಿಕೊಳ್ಳಲು ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಪಟ್ಟ : ಎಂಬಿ ಪಾಟೀಲ್‌ ವ್ಯಂಗ್ಯ

ವಿಜಯಪುರ : ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಬಳಸಿಕೊಳ್ಳಲೆಂದೇ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ವಂಗ್ಯವಾಡಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಅವರನ್ನು ಎರಡು ಬಾರಿ ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಅವರನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಎಲ್ಲರಿಗೂ ಗೊತ್ತು. ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಗೆ ಬೆಂಕಿ ಹತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ವಿಜಯೇಂದ್ರ ನೇಮಕ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ವಿಜಯೇಂದ್ರ ನೇಮಕಕ್ಕೆ ಯತ್ನಾಳ್‌ ಮತ್ತಿತರರು ಅಸಮಾಧಾನಗೊಂಡಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ಪ್ರಶ್ನೆಯನ್ನು ಯತ್ನಾಳ್‌ ಅವರಿಗೆ ಕೇಳಿ, ಅದು ಬಿಟ್ಟು ನನಗಲ್ಲ. ಅವರು ಅಸಮಾಧಾನಗೊಂಡಿದ್ದಾರಾ ಇಲ್ಲವೇ ಖುಷಿಯಾಗಿದ್ದಾರಾ ಎಂಬುದಕ್ಕೆ ಯತ್ನಾಳ್‌ ಅವರನ್ನೇ ಕೇಳಿ ಎಂದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಇಲ್ಲವೇ ವಿರೋಧ ಪಕ್ಷದ ನಾಯಕನಾಗಲು ಯತ್ನಾಳ್‌ ಜಾಕೆಟ್ ಹೊಲಿಸಿಕೊಂಡು ಕುಳಿತಿದ್ದರು. ದೆಹಲಿಯಲ್ಲಿ ತಿಂಗಳುಗಳ ಕಾಲ ಠಿಕಾಣಿ ಹೂಡಿದ್ದರು. ಆದರೆ ಅವರ ಆಸೆ ಫಲಿಸಲಿಲ್ಲ. ಇತ್ತ ನಮ್ಮ ಜಿಲ್ಲೆಯವರೇ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ನಾವೂ ಖುಷಿ ಪಡುತ್ತಿದ್ದೆವು ಎಂದು ಲೇವಡಿ ಮಾಡಿದರು.

ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಮಾತನಾಡಿರುವ ವಿಡಿಯೋ ವೈರಲ್ ಬಗ್ಗೆ ನನಗೆ ಗೊತ್ತಿಲ್ಲ. ವಿಡಿಯೋ ಕ್ಲಿಪ್ಪಿಂಗ್ ಮೇಲೆ ಆರೋಪ ಮಾಡುವುದು ಸರಿಯಲ್ಲ. ಯತೀಂದ್ರ ತಮ್ಮ ಕ್ಷೇತ್ರದಲ್ಲಿದ್ದಾರೆ. ಕ್ಷೇತ್ರದ ಕೆಲಸಗಳ ಕುರಿತು ಮಾತನಾಡಿದ್ಧಾರೆ. ಅವರ ವಿಡಿಯೋ ಬಗ್ಗೆ
ಸುಮ್ಮನೆ ರಾಜಕೀಯ ಮಾಡಲಾಗುತ್ತಿದೆ. ಯತೀಂದ್ರ ಯಾರ ಹೆಸರನ್ನು ಹೇಳಿದ್ದಾರೆ ಅವರೇ ಸ್ಪಷ್ಟೀಕರಣ ಕೊಡುತ್ತಾರೆ ಬಿಡಿ ಎಂದರು.















































































error: Content is protected !!
Scroll to Top