ಹನಿಟ್ರ್ಯಾಪ್ ಮಾಡಿ ಹಣ ಕಿತ್ತುಕೊಂಡ ಯುವತಿ
ಮಡಿಕೇರಿ : ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತು ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗಿನಲ್ಲಿ ಸಂಭವಿಸಿದೆ.
ಮೃತ ಯೋಧನನ್ನು ಸಂದೇಶ್ ಎಂದು ಹೇಳಲಾಗಿದೆ. ಈತನನ್ನು ಪ್ರೀತಿಯ ನಾಟಕವಾಡಿ ಬಲೆಗೆ ಕೆಡವಿ ಹನಿಟ್ರ್ಯಾಪ್ ಮಾಡಿದ ಯುವತಿಯನ್ನು ಜೀವಿತಾ ಎಂದು ಗುರುತಿಸಲಾಗಿದೆ. ಮದುವೆಯಾಗಿದ್ದ ಯೋಧನನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ ಜೀವಿತಾ ಆತನೊಂದಿಗೆ ಸುತ್ತಾಟ ಮಾಡಿ ಫೋಟೋ ಹಾಗೂ ವೀಡಿಯೊ ಇಟ್ಟುಕೊಂಡು ತನ್ನ ಸ್ನೇಹಿತರೊಂದಿಗೆ ಸೇರಿ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಕಿತ್ತುಕೊಂಡಿದ್ದಾಳೆ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಯೋಧನಿಗೆ ಏಕಾಏಕಿ 50 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದಳು. ಇದರಿಂದ ಕಂಗಾಲಾದ ಯೋಧ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಂತ ಹಂತವಾಗಿ ಯುವತಿ ಸುಮಾರು 20 ಲಕ್ಷ ರೂ., ಕಾರು ಹಾಗೂ ಆಸ್ತಿಯ ದಾಖಲೆಗಳನ್ನು ಕಿತ್ತುಕೊಂಡಿದ್ದಾಳೆ. ಆಕೆಯ ಕಾಟ ತಾಳಲಾಗದೆ ಸಂದೇಶ್ ಎಲ್ಲ ವಿಚಾರವನ್ನು ಪತ್ನಿ ಯಶೋಧರಾಗೆ ಹೇಳಿದ್ದಾರೆ. ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧನ ಪತ್ನಿ ನೀಡಿದ ದೂರಿನ ಪ್ರಕಾರ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.















































































