ಕಾರ್ಕಳ ನಗರ : ರಸ್ತೆ ತುಂಬೆಲ್ಲ ಹೊಂಡಗುಂಡಿ – ಸುಗಮ ಸಂಚಾರಕ್ಕೆ ಸಂಚಕಾರ

ಕಾರ್ಕಳ : ಕಾರ್ಕಳ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ, ರಸ್ತೆ ಸಮಸ್ಯೆಗೆ ಇನ್ನೂ ಮುಕ್ತಿ ದೊರೆತಿಲ್ಲ. ರಸ್ತೆಯ ಮಧ್ಯದಲ್ಲಿರುವ ಅಪಾಯಕಾರಿ ಗುಂಡಿಗಳು ವಾಹನ ಸವಾರರಲ್ಲಿ ಜೀವ ಭಯ ಹೆಚ್ಚಿಸಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ರಸ್ತೆ ದುರಸ್ತಿಯ ಬಗ್ಗೆ ಗಮನವೇ ಹರಿಸದಿರುವುದು ದುರಂತ.

ಅನಂತಶಯನದಿಂದ ತೆಳ್ಳಾರು ಸಾಗುವ ಹದಗೆಟ್ಟಿರುವ ರಸ್ತೆ

ತೆಳ್ಳಾರಿನ ಹೆಬ್ಬಾಗಿಲು ಎಂದೆನಿಸಿಕೊಂಡಿರುವ ಅನಂತಶಯನ ರಸ್ತೆಯಲ್ಲಿ ಗುಂಡಿಗಳೇ ತುಂಬಿ ಹೋಗಿವೆ. ಒಂದೆಡೆ ಬಾರ್‌, ಮತ್ತೊಂದೆಡೆ ರಿಕ್ಷಾ ಸ್ಟ್ಯಾಂಡ್‌, ಇನ್ನೊಂದೆಡೆ ಶಾಲಾ ವಿದ್ಯಾರ್ಥಿಗಳ ಸಂಚಾರ ನಡುವೆ ಗುಂಡಿಗಳಿಂದ ಕೂಡಿದ ರಸ್ತೆ ಅಪಾಯಕ್ಕೆ ಬಾಯ್ದೆರದಂತಿದೆ. ರಸ್ತೆ ಸಂಪೂರ್ಣ ಹದೆಗೆಟ್ಟು ಜಲ್ಲಿಕಲ್ಲುಗಳು ಮೇಲೆದ್ದಿದ್ದು ಗುಂಡಿಗಳಾಗಿದೆ. ಈ ಗುಂಡಿಗಳನ್ನು ತಪ್ಪಿಸಿಕೊಂಡು ವಾಹನ ಚಲಾಯಿಸುವುದು ವಾಹನ ಸವಾರರಿಗೆ ಹರಸಾಹಸವಾಗಿದೆ.

ಮಂಗಳೂರು ಸಾಗುವ ರಸ್ತೆ – ಜಲ್ಲಿಕಲ್ಲುಗಳು ಎದ್ದು, ಗುಂಡಿಗಳಿಂದ ಆವೃತ

ಮೂರು ಮಾರ್ಗದಿಂದ ಮಂಗಳೂರು ಕಡೆ ಸಾಗುವ ರಸ್ತೆಯಲ್ಲಿ ಹೊಟೇಲ್‌ ಪಿಂಗಾರದ ಮುಂಭಾಗದಲ್ಲಿ ಗಾಂಧಿ ಮೈದಾನದೆಡೆಗೆ ಸಾಗಲು ತಿರುವು ಪಡೆಯುವಾಗ ಇರುವ ಹೊಂಡಗಳು ವಾಹನ ಸವಾರರು ಮಾತ್ರವಲ್ಲದೆ ಪಾದಚಾರಿಗಳಲ್ಲೂ ಆತಂಕ ಸೃಷ್ಟಿಸಿದೆ. ಇದು ನಗರದ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆಯಾಗಿದ್ದು, ನಿತ್ಯ ಸಂಚರಿಸುವವರು ಮಾತ್ರವಲ್ಲದೆ ಹೊಸಬರು ಈ ರಸ್ತೆಯಲ್ಲಿ ಪ್ರಯಾಣಿಸುತ್ತಾರೆ. ಈ ಸಂದರ್ಭ ಗುಂಡಿಯ ಅರಿವೇ ಇಲ್ಲದವರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇನ್ನು ರಸ್ತೆ ತಿರುವು ಪಡೆಯುವಾಗ ಗುಂಡಿಯನ್ನು ತಪ್ಪಿಸಿ ಮುಂಭಾಗದಿಂದ ಬರುವ ವಾಹನಗಳನ್ನು ದಾಟಿ ಹೋಗುವುದು ಸವಾರರಿಗೆ ಸವಾಲಿನಂತಾಗಿದೆ. ರಸ್ತೆಯ ಬದಿಯಲ್ಲಿ ಹೊಂಡವಾಗಿದ್ದು, ಬದಿಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ವಾಹನ ಸವಾರರೂ ಗುಂಡಿ ತಪ್ಪಿಸಲು ಹೋಗಿ ಎಲ್ಲಿ ನಮಗೆ ಗುದ್ದುತ್ತಾರೋ ಎಂಬ ಆತಂಕವಿದೆ.

ಗುಂಡಿಗಳಿಂದ ಆವೃತವಾದ ಬಂಡೀಮಠ ಅಂಬೇಡ್ಕರ್‌ ಸರ್ಕಲ್‌ ರಸ್ತೆ

ಬಂಡೀಮಠದಿಂದ ಉಡುಪಿ ಸಾಗುವಾಗ ಅಂಬೇಡ್ಕರ್‌ ಸರ್ಕಲ್‌ನಲ್ಲಿರುವ ಗುಂಡಿಗಳು ವಾಹನ ಸಂಚಾರಕ್ಕೆ ಬಹುದೊಡ್ಡ ಸಮಸ್ಯೆಯಾಗಿದೆ. ಮುಖ್ಯವಾಗಿ ಈ ರಸ್ತೆಯಲ್ಲಿ ಓಡಾಡುವ ಬಸ್ಸುಗಳು ಗುಂಡಿಯನ್ನು ತಪ್ಪಿಸಿಕೊಂಡು ಹೋಗುವುದು ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಇಲ್ಲಿ ಪ್ರಯಾಣಿಕರು ಮೇಲೆ ಹತ್ತಲು ಬಸ್‌ ನಿಲ್ಲಿಸುವುದರಿಂದ ಬಸ್‌ ಚಾಲಕನಿಗೆ ಗುಂಡಿ ತಪ್ಪಿಸಿ ನಿಲ್ಲಿಸುವುದು ಸಹ ಸಮಸ್ಯೆಯಾಗಿದೆ. ಮಳೆಗಾಲದಲ್ಲಂತು ಈ ರಸ್ತೆಯಲ್ಲಿ ಓಡಾಟುವ ಎಲ್ಲರಿಗೂ ಸಮಸ್ಯೆಯೇ, ಈ ಗುಂಡಿಗಳಲ್ಲಿ ತುಂಬಿದ್ದ ನೀರು ವಾಹನ ಸಾಗುವಾಗ ಜನರ ಮೈ ಮೇಲೆಯೇ ಚಿಮ್ಮುತ್ತಿತ್ತು. ಇನ್ನು ಎದ್ದಿರುವ ಜಲ್ಲಿಕಲ್ಲುಗಳಿಂದ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುವ ಭಯವಿದೆ.

ಪುರಸಭೆ ವ್ಯಾಪ್ತಿಯಲ್ಲಿರುವ ಈ ಮೂರು ಮರಣ ಗುಂಡಿಗಳು ವಾಹನ ಸವಾರರಲ್ಲಿ ಪ್ರಾಣಾಪಾಯದ ಭಯವನ್ನು ಹೆಚ್ಚಿಸಿದೆ. ಈ ರಸ್ತೆಯಲ್ಲಿ ಬೇಸಿಗೆಯಲ್ಲಿ ಧೂಳಿನ ಸಮಸ್ಯೆಯಾದರೆ, ಮಳೆಗಾಲದಲ್ಲಿ ಕೆಸರು. ಅಧಿಕಾರಿಗಳ ಬೇಜವಾಬ್ದಾರಿಯಿಂದ ವಾಹನ ಸವಾರರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಪ್ರಾಣಕ್ಕೆ ಎರವಾಗುವ ಮೊದಲು ಎಚ್ಚೆತ್ತು ದುರಸ್ತಿ ಮಾಡುವ ಕೆಲಸವಾಗಬೇಕಿದೆ.

ವರದಿ : ನಳಿನಿ ಎಸ್‌. ಸುವರ್ಣ



























































































































error: Content is protected !!
Scroll to Top