ಧರ್ಮಸ್ಥಳದಲ್ಲಿ 3 ಹೊಸ ಕಲ್ಯಾಣ ಮಂಟಪ, ಉಡುಪಿ ಆಯುರ್ವೇದ ಕಾಲೇಜಿಗೆ ನೂತನ ಕಟ್ಟಡ

ಡಾ.ಡಿ.ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕ ವರ್ಧಂತಿಯ ಹೊಸ ಯೋಜನೆಗಳು

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಮೂರು ಹೊಸ ಕಲ್ಯಾಣ ಮಂಟಪಗಳ ನಿರ್ಮಾಣ, ರಜತಾದ್ರಿ ವಸತಿಗೃಹಕ್ಕೆ 200 ಹೆಚ್ಚುವರಿ ಕೊಠಡಿ ಸೇರ್ಪಡೆ, ಉಡುಪಿಯಲ್ಲಿ ಆಯುರ್ವೇದ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣ, ಮೈಸೂರಿನಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ಹೊಸ ವಸ್ತು ಸಂಗ್ರಹಾಲಯ, ಧಾರವಾಡದಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಮತ್ತು ಫಾರ್ಮಸಿ ಕಾಲೇಜು ಇವು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ತನ್ನ ಪಟ್ಟಾಭಿಷೇಕ ವರ್ಧಂತಿಯ ಸಂದರ್ಭದಲ್ಲಿ ಪ್ರಕಟಿಸಿರುವ ನೂತನ ಯೋಜನೆಗಳು. ಧರ್ಮಸ್ಥಳದಲ್ಲಿ ಮಂಗಳವಾರ ಪಟ್ಟಾಭಿಷೇಕದ 56ನೇ ವರ್ಧಂತ್ಯುತ್ಸವ ಸಮಾರಂಭ ನಡೆಯಿತು.
ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ನಿತ್ಯೋತ್ಸವವಾಗಿದ್ದು ಇದರ ಜತೆಗೆ ಹೊಸ ಸೇವಾಕಾರ್ಯಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಧಾರವಾಡದಲ್ಲಿರುವ ಎಸ್‌ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯ ದೇಶದಲ್ಲೇ ಶ್ರೇಷ್ಠ ವಿಶ್ವವಿದ್ಯಾಲಯ ಎಂಬ ಮಾನ್ಯತೆ ಪಡೆದಿದೆ. ಅಲ್ಲಿನ ವೈದ್ಯಕೀಯ ಕಾಲೇಜು ದೇಶದಲ್ಲೇ ಒಂಭತ್ತನೇ ಸ್ಥಾನದಲ್ಲಿದೆ. ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜು ಕೂಡಾ ನಿರ್ವಹಣೆ ಗುಣಮಟ್ಟ ಮತ್ತು ಪರೀಕ್ಷಾ ಫಲಿತಾಂಶದಲ್ಲಿ ಉನ್ನತ ಶ್ರೇಣಿ ಹೊಂದಿವೆ ಎಂದರು.
ತಮ್ಮ ಸಂಸದರ ನಿಧಿಯಿಂದ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಹಾಲು ಮತ್ತು ಹಣ್ಣು ನಿತ್ಯ ಆದಾಯ ಕೊಡುವ ಮೂಲಗಳಾಗಿದ್ದು ಇವುಗಳ ಉತ್ಪಾದನೆಗೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ತಿಳಿಸಿದರು.
ಊರಿನ ನಾಗರಿಕರು, ಅಭಿಮಾನಿಗಳು ಮತ್ತು ಭಕ್ತರಿಂದ ಹೆಗ್ಗಡೆಯವರಿಗೆ ಗೌರವಾರ್ಪಣೆ. ಅಭಿಮಾನಿಗಳು ಹಣ್ಣು-ಹಂಪಲು, ಹೂವಿನ ಹಾರ ಅರ್ಪಿಸಿ ಹೆಗ್ಗಡೆಯವರಿಗೆ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡಿದರು. ಹೆಗ್ಗಡೆಯವರು ಎಲ್ಲರ ಯೋಗ-ಕ್ಷೇಮ ವಿಚಾರಿಸಿ ಶುಭ ಹಾರೈಸಿದರು.
ಶ್ರೀ ಮಂಜುನಾಥ ಸ್ವಾಮಿ ಅನುಗ್ರಹ, ಕಾರ್ಯಕರ್ತರು ಮತ್ತು ಸಿಬ್ಬಂದಿಯ ನಿಷ್ಠೆ ಮತ್ತು ಕಾರ್ಯತತ್ಪರತೆಯಿಂದ ಎಲ್ಲ ಯೋಜನೆಗಳು ಮತ್ತು ಯೋಚನೆಗಳು ಯಶಸ್ವಿಯಾಗುತ್ತಿವೆ ಎಂದು ತೃಪ್ತಿ ವ್ಯಕ್ತಪಡಿಸಿದರು.































































































































error: Content is protected !!
Scroll to Top