ಸಮುದಾಯ ಅಭಿವೃದ್ಧಿಗಾಗಿ ಸರಕಾರಿ ಸವಲತ್ತನ್ನು ಸದುಪಯೋಗಪಡಿಸಿ : ಯೋಗೀಶ್ ಇನ್ನಾ
ಕಾರ್ಕಳ : ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿಶ್ವಕರ್ಮ ಸಮಾಜದಲ್ಲಿ ಪ್ರತಿಭಾನ್ವಿತರಾಗಿ ಬಾಳಿ ಎಂದು ಶಿಲ್ಪಿ ರಾಮಚಂದ್ರ ಆಚಾರ್ಯ ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ಬಾಳಿದರೆ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ಉತ್ತಮ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಅವರು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ನಡೆದ ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ನೇತೃತ್ವದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಯೋಗೀಶ್ ಇನ್ನಾ ಮಾತನಾಡಿ, ಸರಕಾರದ ಯೋಜನೆಗಳನ್ನು ಬಳಸಿಕೊಂಡು ಪ್ರಸ್ತುತ ಪಂಚ ಕಸುಬುಗಳನ್ನು ಇತರೆ ಸಮಾಜದವರು ಮಾಡುತ್ತಿದ್ದಾರೆ. ಇದೊಂದು ಖೇದಕರ ಸಂಗತಿ. ಆದ್ದರಿಂದ ವಿಶ್ವಕರ್ಮರು ಸರಕಾರಿ ಸವಲತ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡು ತನ್ಮೂಲಕ ಸಮುದಾಯದ ಅಭಿವೃದ್ಧಿಯಾಗಬೇಕು ಎಂದರು.

ಪ್ರತಿಭಾ ಪುರಸ್ಕಾರ
ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಇದೇ ಸಂದರ್ಭ ಕೊರೊನಾ ಸಮಯದಲ್ಲಿ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಹಾಗೂ 14 ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ಕರ್ತವ್ಯ ನಿಭಾಯಿಸುತ್ತಿರುವ ಕುಕ್ಕುಂದೂರು ಸಂಪಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ಮಂಡಳಿಯ ಅಧ್ಯಕ್ಷೆ ನಳಿನಿ ವಿಜೇಂದ್ರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಮೊಕ್ತೇಸರರಾದ ಪಿ. ರವಿ ಆಚಾರ್ಯ, ನಿಟ್ಟೆ ಸುರೇಶ್ ಆಚಾರ್ಯ ಮತ್ತು ಪ್ರಭಾ ಹರೀಶ್ ಆಚಾರ್ಯ ಉಪಸ್ಥಿತರಿದ್ದರು. ಶೋಭಾ ಆಚಾರ್ಯ ಪ್ರಾರ್ಥಿಸಿದರು. ಮಂಡಳಿಯ ಉಪಾಧ್ಯಕ್ಷೆ ಕವಿತಾ ಹರೀಶ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಗೀತಾ ಚಂದ್ರ ಮತ್ತು ಮಾಜಿ ಅಧ್ಯಕ್ಷೆ ಜೋತಿ ರವಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಕೋಶಾಧಿಕಾರಿ ಜ್ಯೋತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷೆ ರಮಾ ನವೀನ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಮಾಜದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ನವರಾತ್ರಿಯ ವಿಶೇಷತೆಯ ಬಗ್ಗೆ ಮಾಜಿ ಅಧ್ಯಕ್ಷೆ ಸರೋಜಿನಿ ವಸಂತ್ ತಿಳಿಸಿದರು.







































