ಡಿಕೆಶಿ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಉಪಮುಖ್ಯಮಂತ್ರಿಗೆ ಎದುರಾಯಿತು ಮತ್ತೆ ಸಂಕಷ್ಟ

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಎದುರಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್‌ ಇಂದು ಸಿಬಿಐಗೆ ಗ್ರೀನ್‌ ಸಿಗ್ನಲ್‌ ನೀಡಿದೆ. ಈ ಮಹತ್ವದ ತೀರ್ಪು ಡಿಕೆಶಿ ರಾಜಕೀಯ ನಾಗಾಲೋಟದ ಮೇಲೂ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.
ಸಿಬಿಐ ವಿಚಾರಣೆಯ ಎಫ್ಐಆರ್ ರದ್ದು ಕೋರಿ ಶಿವಕುಮಾರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾ ಮಾಡಿರುವ ನ್ಯಾಯಾಲಯ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯನ್ನು ಕೂಡ ತೆರವುಗೊಳಿಸಿದೆ.

ಆದಾಯ ಮೂಲಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಸಂಬಂಧ ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿದ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ಏಪ್ರಿಲ್‌ನಲ್ಲಿ ಪೂರ್ಣಗೊಂಡು ಕರ್ನಾಟಕ ಹೈಕೋರ್ಟ್ ಆದೇಶ ಕಾಯ್ದಿರಿಸಿತ್ತು.
ನ್ಯಾಯಮೂರ್ತಿ ಕೆ. ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಡಿಕೆಶಿ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲು ಅನುಮತಿ ನೀಡಿದ್ದು ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಆದೇಶ ಹೊರಡಿಸಿದೆ.
ಶಿವಕುಮಾರ್ ಅವರು ಸಾಕಷ್ಟು ವಿಳಂಬದ ನಂತರ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಸಿಬಿಐನ ಬಹುತೇಕ ತನಿಖೆ ಮುಕ್ತಾಯವಾಗಿದೆ ಎಂದು ಕೋರ್ಟ್ ತಿಳಿಸಿದೆ. ತನಿಖೆ ಪೂರ್ಣಗೊಂಡು ಪ್ರಕರಣದ ಅಂತಿಮ ವರದಿಯನ್ನು ಸಿಬಿಐ ಸಲ್ಲಿಸಿದ ನಂತರ ಪ್ರಕರಣ ರದ್ದುಗೊಳಿಸುವಂತೆ ಶಿವಕುಮಾರ್ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಲು ಸ್ವಾತಂತ್ರ್ಯವಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ನಟರಾಜನ್ ಅವರು ತೀರ್ಪಿನ ದಿನಾಂಕದಿಂದ 3 ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಲು ಸಿಬಿಐಗೆ ಆದೇಶಿಸಿದ್ದಾರೆ.
2014- 2018ರ ಸಮಯದಲ್ಲಿ ಆಸ್ತಿ ಗಳಿಕೆಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಡಿಕೆ ವಿರುದ್ಧ ಸಿಬಿಐ ಕೇಸ್ ದಾಖಲಿಸಿ ತನಿಖೆ ಆರಂಭಿಸಿತ್ತು. ಈ ಸಂಬಂಧ ಡಿಕೆಶಿ ಸಿಬಿಐ ತನಿಖೆ ರದ್ದು ಕೋರಿದ್ದರು. ಶಿವಕುಮಾರ್ ಪರ ಉದಯ್‌ ಹೊಳ್ಳ, ಸಂದೇಶ್ ಚೌಟ ಹಾಗೂ ಸಿಬಿಐ ಪರ ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.
2017ರಲ್ಲಿ ಶಿವಕುಮಾರ್‌ ನಿವಾಸ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಅದಾದ ಬಳಿಕ ಜಾರಿ ನಿರ್ದೇಶನಾಲಯ ಕೂಡ ಶಿವಕುಮಾರ್‌ ವಿರುದ್ಧ ತನಿಖೆ ನಡೆಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಬಿಐ 2019ರಲ್ಲಿ ತನಿಖೆ ನಡೆಸಿತ್ತು. ಅದಾದ ಬಳಿಕ ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆಗೆ ಅಂದಿನ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅನುಮತಿ ನೀಡಿತ್ತು.
ಸರ್ಕಾರದ ಅನುಮತಿ ನಂತರ ಅಕ್ಟೋಬರ್‌ 2020ರಲ್ಲಿ ಡಿ.ಕೆ ಶಿವಕುಮಾರ್‌ ವಿರುದ್ಧ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿತ್ತು. ನಂತರ ಇದೇ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್‌ ತಿಹಾರ್‌ ಜೈಲಿಗೆ ಕೂಡ ಹೋಗಿದ್ದರು, ಜಾಮೀನು ಪಡೆದು ಹೊರ ಬಂದಿದ್ದರು. ನಂತರ ಸಿಬಿಐ ಪ್ರಕರಣ ರದ್ದುಗೊಳಿಸಬೇಕು ಎಂದು ಹೈಕೋರ್ಟ್‌ಗೆ ಡಿಕೆ ಶಿವಕುಮಾರ್‌ ಅರ್ಜಿ ಸಲ್ಲಿಸಿದ್ದರು.















































































error: Content is protected !!
Scroll to Top