ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಉಚ್ಚಾಟನೆ – ಕುಮಾರಸ್ವಾಮಿ ನೂತನ ಅಧ್ಯಕ್ಷ
ಬೆಂಗಳೂರು : ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಉಚ್ಚಾಟಿಸಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಗುರುವಾರ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗಾರಗೊಂದಿಗೆ ಮಾತನಾಡಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇ ಗೌಡ, ಪಕ್ಷದ ಸಭೆಯಲ್ಲಿ ಇಬ್ರಾಹಿಂ ಅವರನ್ನು ಉಚ್ಚಾಟನೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ 9 ಶಾಸಕರು, 8 ಮೇಲ್ಮನೆ ಸದಸ್ಯರ ಅಭಿಪ್ರಾಯ ಪಡೆಯಲಾಗಿದೆ. ತೆರವಾದ ಸ್ಥಾನಕ್ಕೆ ಎಚ್.ಡಿ. ಕುಮಾರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಜತೆಗಿನ ಮೈತ್ರಿಯನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ಅವರು ವಿರೋಧಿಸಿ ನಿರಂತರವಾಗಿ ವಾಗ್ದಾಳಿ ನಡೆಸಿಕೊಂಡು ಬಂದಿದ್ದರು. ಬಹಿರಂಗ ಹೇಳಿಕೆಗಳ ಮೂಲಕ ಪಕ್ಷದ ವರಿಷ್ಠರನ್ನು ಮುಜುಗರಕ್ಕೀಡು ಮಾಡುತ್ತಿದ್ದರು. ಇದೀಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಇಬ್ರಾಹಿಂ ಅವರನ್ನು ಉಚ್ಚಾಟಿಸಿರುತ್ತಾರೆ. ಇದರೊಂದಿಗೆ ಪಕ್ಷದ ವಿವಿಧ ಘಟಕಗಳನ್ನು ವಿಸರ್ಜಿಸಿರುತ್ತಾರೆ.







































