ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಆಳ್ವಾಸ್ ಎನ್‌ಎಸ್‌ಎಸ್ ಶಿಬಿರದ ಸಮಾರೋಪ
ಕಾರ್ಕಳ : ಸಂಘರ್ಷವಾಗದ ಅನುಸಂಧಾನದ ಬದುಕನ್ನು ರಾಷ್ಟ್ರೀಯ ಸೇವಾ ಯೋಜನೆಯು ಕಲಿಸುತ್ತದೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚರ‍್ಯ ಡಾ ಮಂಜುನಾಥ ಕೋಟ್ಯಾನ್ ನುಡಿದರು.
ಅವರು ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಇರ್ವತ್ತೂರು ಕೊಳಕೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ‘ಸ್ವಚ್ಛ ಪರಿಸರ ಮತ್ತು ಸ್ವಚ್ಛ ಸಮಾಜಕ್ಕಾಗಿ ಯುವಜನತೆ- ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಚಲನಾಶೀಲತೆಯ ಕೌಟುಂಬಿಕ ಪದ್ದತಿಯಲ್ಲಿ ಕಳೆದ ಈ ಶಿಬಿರದ ಏಳು ದಿನಗಳು ವಿದ್ಯಾರ್ಥಿಗಳ ಜೀವನದಲ್ಲಿ ಸದಾ ಶಾಶ್ವತವಾಗಿ ಉಳಿಯುತ್ತದೆ. ಒಳ್ಳೆಯ ಶಿಕ್ಷಣ ವ್ಯವಸ್ಥೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಅನುಸಂಧಾನವಾಗಿರಬೇಕು. ರಾಷ್ಟೀಯ ಸೇವಾ ಯೋಜನೆಯು ಈ ಪರಿಕಲ್ಪನೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಶ್ರದ್ಧೆ ಹಾಗೂ ಪೂರ್ವ ಸಿದ್ದತೆಗಳು ಎನ್‌ಎಸ್‌ಎಸ್ ಕಲಿಸುವ ಆರಂಭಿಕ ಪಾಠ. ಜೀವನದಲ್ಲಿ ಬದಲಾವಣೆಗಿಂತ ಪರಿವರ್ತನೆ ಅತೀ ಮುಖ್ಯ. ಕೆತ್ತಿಸಿಕೊಳ್ಳಲು ತಾಳ್ಮೆ ಇಲ್ಲದವರು ಮೂರ್ತಿಯಾಗಲು ಹಂಬಲಿಸಬಾರದು. ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ದೈರ್ಯದಿಂದ ಎದುರಿಸಬೇಕು. ಮನುಷತ್ವ ಸದಾ ನಮ್ಮ ಮನಸ್ಸಿನ ಭಾಗವಾಗಿರಬೇಕು. ತೊಡಗಿಸಿಕೊಳ್ಳುವುದರಲ್ಲಿ ಸಿಗುವ ಆನಂದ ಅಡಗಿಸಿಕೊಳ್ಳುವುದರಲ್ಲಿ ಸಿಗಲಾರದು. ರಾಷ್ಟ್ರೀಯ ಸೇವಾ ಯೋಜನೆಯು ಇಂತಹ ಹತ್ತು ಹಲವು ಬದುಕಿನ ಪಾಠಗಳನ್ನು ಕಲಿಸುವ ವೇದಿಕೆಯಾದ್ದರಿಂದ, ಇದರ ಸದ್ಬಳಕೆ ಅತೀ ಮುಖ್ಯ ಎಂದರು.

ಆಳ್ವಾಸ್‌ನ ವಿದ್ಯಾರ್ಥಿಗಳು ತಮ್ಮ ಜೀವನದ ಆದರ್ಶ ವ್ಯಕ್ತಿಗಾಗಿ ಹುಡುಕಾಡುವ ಅಗತ್ಯವಿಲ್ಲ, ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವರ ವ್ಯಕ್ತಿತ್ವವೇ ಆದರ್ಶಪ್ರಾಯ. ಸದಾ ಸಮಾಜದ ಉನ್ನತಿಗಾಗಿ ತುಡಿಯುವ ಅವರ ಸ್ವಭಾವ ಯುವ ಜನತೆಗೆ ದಾರಿದೀಪ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗಣನೀಯ ಪ್ರಮಾಣದಲ್ಲಿ ಧನಾತ್ಮಕ ಬದಲಾವಣೆ ತರಬಲ್ಲ ಶ್ರೇಷ್ಠ ವೇದಿಕೆ ರಾಷ್ಟ್ರೀಯ ಸೇವಾ ಯೋಜನೆ. ಇಲ್ಲಿ ಕಲಿತ ಶಿಸ್ತಿನ ಪಾಠವನ್ನು ಬದುಕಿನಲ್ಲಿ ಆಳವಡಿಸಿಕೊಂಡಾಗ ಅದರ ಮೌಲ್ಯ ಇನ್ನಷ್ಟು ದುಪ್ಪಟ್ಟಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತಾನಾಡಿದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ ಪ್ರೋ. ಸದಾಕತ್, ಜೀವನದಲ್ಲಿ ಆಗುವ ಪ್ರತಿ ಪ್ರಗತಿಯು ಬದಲಾವಣೆಯ ಸಂಕೇತ, ಆದರೆ ಪ್ರತಿ ಬದಲಾವಣೆ ಪ್ರಗತಿಯ ಸಂಕೇತವಲ್ಲ. ವ್ಯಕ್ತಿಯ ಜೀವನದಲ್ಲಿನ ಬದಲಾವಣೆ ಮುಖ್ಯವಲ್ಲ, ಆದರೆ ಪರಿವರ್ತನೆ ಸದಾ ಯಶಸ್ಸಿನೆಡೆಗೆ ಸಾಗಿಸುತ್ತದೆ ಎಂದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉದಯ್ ಕೋಟ್ಯಾನ್, ಇರ್ವತ್ತೂರು
ಗ್ರಾಮ ಪಂಚಾಯತಿ ಅಧ್ಯಕ್ಷ ಭರತ ಕುಮಾರ ಜೈನ್ ಮಾತನಾಡಿದರು.
ಶಿಬಿರಾರ್ಥಿಗಳಾದ ವರುಣ್ ಕಶ್ಯಪ್, ಶ್ರೀರಕ್ಷಾ, ಬಸವೇಶ್, ರ‍್ಯನ್ ಜಯಕುಮಾರ್ ಅನುಭವ ಹಂಚಿಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಿಬಿರಾಧಿಕಾರಿ ಅರುಣ್ ಕುಮಾರ್ ಓ. ಆರ್. ಏಳು ದಿನಗಳ ಕಾಲ ನಡೆದ ವಾರ್ಷಿಕ ಶಿಬಿರದ ವರದಿಯನ್ನು ವಾಚಿಸಿದರು. ಇದೇ ಸಂದರ್ಭ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಿದ ಇರ್ವತ್ತೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭರತ ಕುಮಾರ ಜೈನ್‌ನ್ನು ಆಳ್ವಾಸ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಇರ್ವತ್ತೂರು ಗ್ರಾಮ ಪಂಚಾಯತಿ ಸದಸ್ಯ ಶರತ್ ಅಂಚನ್, ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ಶಿಬಿರದ ವ್ಯವಸ್ಥಾಪಕ ಅಂಬರೀಶ್ ಚಿಪಳೂಣಕರ್ ಉಪಸ್ಥಿತರಿದ್ದರು. ಶಿಬಿರಕ್ಕೆ ಸಹಕಾರ ನೀಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಅಂಕಿತ ಹಾಗೂ ಜೀವನ್‌ನ್ನು ಗೌರವಿಸಲಾಯಿತು. ಮೇಘನಾ ಸ್ವಾಗತಿಸಿ, ಉಪನ್ಯಾಸಕಿ ಶೆಲೆಟ್ ಮೋನಿಸ್ ನಿರೂಪಿಸಿದರು. ಆಕಾಶ್ ಬಹುಮಾನದ ಪಟ್ಟಿಯನ್ನು ವಾಚಿಸಿ, ಸ್ವಾತಿ ವಂದಿಸಿದರು.










































































