ಎನ್‌ಎಸ್‌ಎಸ್‌ನಿಂದ ಸಮಾಜದಲ್ಲಿ ಧನಾತ್ಮಕ ಬದಲಾವಣೆ – ಅಶೋಕ್ ನಾಯಕ್
ಕಾರ್ಕಳ : ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯೊಂದಿಗೆ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ತನ್ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆಯಾಗುತ್ತದೆ ಎಂದು ಹಿರ್ಗಾನ ಮಹಾಲಕ್ಷ್ಮೀ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಅಭಿಪ್ರಾಯಪಟ್ಟರು.
ಅವರು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಹಿರ್ಗಾನದ ಮೂರೂರು ಬಿ. ಎಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ. 12 ರಿಂದ ಅ. 18 ರವರೆಗೆ ನಡೆದ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಎನ್‌ಎಸ್‌ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಸಹಕಾರ, ಸಹಬಾಳ್ವೆಯ ಅರಿವು ಮೂಡಿಸುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿಯವರು ಶಿಬಿರದ ಆರಂಭ ಸವಾಲಿನ ಕೆಲಸವಾಗಿದ್ದರೂ, ಊರಿನ ಗಣ್ಯರು, ಮಹನೀಯರ ಮತ್ತು ದಾನಿಗಳ ಸಹಕಾರದಿಂದ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು ಎಂದು ಹರ್ಷ ವ್ಯಕ್ತಪಡಿಸಿದರು.

ಬಿ. ಎಂ. ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಆಶಾ ಕ್ಲೇರಾ ವಾಸ್ ಮಾತನಾಡಿ, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯಂತ ಸಹಕಾರ ಮನೋಭಾವದಿಂದ ಎಂಟು ದಿನಗಳ ಕಾಲ ಇಲ್ಲಿ ಇದ್ದು ಅನೇಕ ವಿಚಾರಗಳನ್ನು ಕಲಿಯುವುದರೊಂದಿಗೆ ಗ್ರಾಮೀಣ ಬದುಕಿನ ಸೊಗಡನ್ನು ಸವಿದರು. ಮುಂದೆಯೂ ವಿದ್ಯಾರ್ಥಿಗಳು ತಮ್ಮ ವಿನಯವಂತಿಕೆಯಿಂದ ಜೀವನದಲ್ಲಿ ಯಶಸ್ಸು ಸಾಧಿಸುವಂತಾಗಲಿ ಎಂದು ಶುಭ ಹಾರೈಸಿದರು.
ಪ್ರಾಚಾರ್ಯ ವಿದ್ವಾನ್ ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೀವನದಲ್ಲಿ ಕಷ್ಟ ಸುಖಗಳು ಸಾಮಾನ್ಯ. ಕಷ್ಟ ಬಂದಾಗ ಹೆದರದೆ ಎದುರಿಸಿ ಗೆಲ್ಲುವುದನ್ನು ಕಲಿಯಬೇಕು. ಕಷ್ಟದಿಂದ ಪಡೆದ ಫಲ ಅತ್ಯಂತ ಮೌಲ್ಯವನ್ನು ಹೊಂದಿದೆ. ಸೋಲು ಗೆಲುವಿನ ಆರಂಭದ ಹಂತ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಿರ್ಗಾನ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಸಂತೋಷ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಸಿರಿಯಣ್ಣ ಶೆಟ್ಟಿ, ಚೇತನ್ ಶೆಟ್ಟಿ ಕೊರಳ, ಹೋಟೆಲ್ ಬಾಲಾಜಿಯ ಮಾಲಕ ಸತೀಶ್ ಹೆಗ್ಡೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ರೇವತಿ ಶೆಟ್ಟಿ, ಸದಸ್ಯೆ ಸುಜಾತ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಶಿವಕುಮಾರ್ ಸ್ವಾಗತಿಸಿ, ಸಹ ಶಿಬಿರಾಧಿಕಾರಿ ಚಂದ್ರಕಾಂತ್ ದಾನಿಗಳ ವಿವರ ನೀಡಿದರು. ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ಶಿಬಿರಾಧಿಕಾರಿ ಉಮೇಶ್ ವಂದಿಸಿದರು.










































































