ರಾಜ್ಯದಲ್ಲಿ 18 ಜಿಲ್ಲೆಗಳು ಮಾತ್ರ ಆಯ್ಕೆ
ಕಾರ್ಕಳ: ಕೇಂದ್ರ ಸರಕಾರ ಇತ್ತೀಚೆಗೆ ಜಾರಿ ಮಾಡಿರುವ ಪಿಎಂ ವಿಶ್ವಕರ್ಮ ಯೋಜನೆಗೆ ಸದ್ಯಕ್ಕೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಸೇರಿ ಕರಾವಳಿಯ ಮೂರೂ ಜಿಲ್ಲೆಗಳು ಆಯ್ಕೆಯಾಗಿಲ್ಲ. ಮೊದಲ ಹಂತದಲ್ಲಿ ರಾಜ್ಯದ 18 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದು ಉಡುಪಿ, ದಕ್ಷಿಣ ಕನ್ನಡ ಸಹಿತ 13 ಜಿಲ್ಲೆಗಳ ಫಲಾನುಭವಿಗಳಿಗೆ ಸದ್ಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಲ್ಲ.
ಪಾರಂಪರಿಕವಾಗಿ ನಡೆದುಕೊಂಡು ಬರುತ್ತಿರುವ ಸುಮಾರು 18 ವೃತ್ತಿಗಳವರಿಗೆ ಕೌಶಲ ಮತ್ತು ಆರ್ಥಿಕ ಬಲ ನೀಡಿ ಜೀವನ ಮಟ್ಟ ಸುಧಾರಿಸುವ ಜತೆಗೆ ದೇಶದ ಆರ್ಥಿಕ ಪ್ರಗತಿಗೆ ಅನುಕೂಲವಾಗುವಂತೆ ಕೇಂದ್ರ ಸರಕಾರ ಈ ಯೋಜನೆ ರೂಪಿಸಿದೆ.
ಇದರಲ್ಲಿ ಬಡಗಿಗಳು, ದೋಣಿ ತಯಾರಕರು, ಕುಲುಮೆ ಕೆಲಸಗಾರರು, ಕಮ್ಮಾರರು, ಬುಟ್ಟಿ-ಚಾಪೆ, ಬಾಸ್ಕೆಟ್ ನೇಯ್ಗೆಗಾರರು, ಅಕ್ಕಸಾಲಿಗರು, ಅಗಸರು, ಶಿಲ್ಪಿಗಳು, ಸಾಂಪ್ರದಾಯಿಕ ಗೊಂಬೆ ತಯಾರಕರು, ಕುಂಬಾರರು, ಚಮ್ಮಾರರು, ದರ್ಜಿಗಳು, ಕೇಶ ವಿನ್ಯಾಸಕರು, ಗಾರೆಗಾರರು, ಮಾಲೆ ತಯಾರಕರು, ಮೀನುಗಾರಿಕೆ ಬಲೆ ತಯಾರಕರು ಬರುತ್ತಾರೆ.
ಮೊದಲ ಹಂತದಲ್ಲಿ ಎಲ್ಲ ಜಿಲ್ಲೆಯ ಫಲಾನುಭವಿಗಳಿಗೆ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದರೆ ತಾಂತ್ರಿಕ ಸಮಸ್ಯೆ ಸರಿಪಡಿಸಲು ಕಷ್ಟವಾಗಬಹುದು ಎಂಬ ಕಾರಣಕ್ಕೆ 18 ಜಿಲ್ಲೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಎರಡನೇ ಹಂತದಲ್ಲಿ ಎಲ್ಲ ಜಿಲ್ಲೆಗಳಿಗೂ ಅವಕಾಶ ಸಿಗುವ ಸಾಧ್ಯತೆಯಿದೆ.
ಉಡುಪಿ ಮತ್ತು ದ.ಕ.ದಲ್ಲಿ ಈ ವೃತ್ತಿಯನ್ನು ಮಾಡಿಕೊಂಡಿರುವವರು ಅನೇಕ ಮಂದಿಯಿದ್ದು, ಅವರೆಲ್ಲ ಈ ಯೋಜನೆಯನ್ನು ಬಹಳ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.



















