ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಸಚಿವೆಗೆ ಸನ್ಮಾನ
ಕಾಪು : ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಸಮಾಜದಲ್ಲಿ ಶಕ್ತಿ ಸಂಸ್ಕಾರವನ್ನು ಕೊಡುವ ಮೂಲಕ ಸಮಾಜವನ್ನು ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ನಮ್ಮ ಮಠ ಮಂದಿರಗಳು, ಧರ್ಮ, ಸಂಸ್ಕೃತಿ, ಗುರುಗಳು, ಸಂಸ್ಕಾರದ ಕಾರಣದಿಂದ ಉನ್ನತಿಯನ್ನು ಸಾರುತ್ತಿರುವ ನಮ್ಮ ದೇಶಕ್ಕೆ ಗೌರವ ಸಲ್ಲುತ್ತಿದೆ. ಮಕ್ಕಳಲ್ಲೂ ಧಾರ್ಮಿಕ ಶ್ರದ್ಧೆ, ಸಂಸ್ಕಾರ, ಸಂಸ್ಕೃತಿಯನ್ನು ತುಂಬುವ ಮೂಲಕ ಮುಂದಿನ ಪೀಳಿಗೆಗೆ ಭದ್ರ ಧಾರ್ಮಿಕ ತಳಹದಿಯನ್ನು ಹಾಕಿ ಕೊಡೋಣ ಎಂದು ಕೆಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಭಾನುವಾರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರ 19ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಸನ್ಮಾನ ಮತ್ತು ಸ್ವಾಮೀಜಿಯವರಿಂದ ಫಲ ಮಂತ್ರಾಕ್ಷತೆ ಪಡೆದು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯಡಿ ಮೊದಲ ಬಾರಿ ವಿಶ್ವಕರ್ಮ ಸಮುದಾಯಕ್ಕೆ ಮೊದಲ ಹಂತದಲ್ಲಿ 13,000 ಕೋಟಿ ರೂ. ಘೋಷಿಸಲಾಗಿದೆ. ವಂಶ ಪಾರಂಪರ್ಯವಾಗಿ ಕರಗತವಾಗಿರುವ ಕುಲಕಸುಬಿನಲ್ಲಿ ಶ್ರಮ ಕಡಿಮೆ ಮಾಡಿ ಆಧುನಿಕ ತಂತ್ರಜ್ಞಾನ ಬಳಸಿ ತರಬೇತಿ ಪಡೆದು ಸೂಕ್ಷ್ಮ ಆಕರ್ಷಣೀಯ ಕೆಲಸಗಳ ಮೂಲಕ ವಿದೇಶಿಗರ ಬೇಡಿಕೆಯ ಉತ್ಪನ್ನಗಳನ್ನು ತಯಾರಿಸಬೇಕು. ವೇದಾಧ್ಯಯನದ ಮೂಲಕ ಸಂಸ್ಕಾರವನ್ನು ಕೊಡುವ ವಿಶ್ವಬ್ರಾಹ್ಮಣ ಸಮಾಜದ ಜತೆ ನಾವಿದ್ದೇವೆ. ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿ ನೀಡುವ ಕೆಲಸ ನಮ್ಮ ಸರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದಾರೆ. ಮತ್ತಷ್ಟು ಅಭಿವೃದ್ಧಿ ಯೋಜನೆಗಳ ಸಾಕಾರಕ್ಕೆ ನಿಮ್ಮೆಲ್ಲರ ಆಶೀರ್ವಾದ ಮತ್ತೆ ನಮಗಿರಲಿ ಎಂದರು.
ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಧಾರ್ಮಿಕ ಶಕ್ತಿಯೇ ನಮ್ಮ ಅಭಿವೃದ್ಧಿ ಏಳಿಗೆಯ ಮೂಲ ಮಂತ್ರವಾಗಿದೆ. ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ, ಸಮಾಜಕ್ಕಾಗಿ ಜಾರಿಗೆ ತಂದಿರುವ ದೂರದೃಷ್ಟಿಯ ಯೋಜನೆಗಳ ಬಗ್ಗೆ ಹೆಮ್ಮೆ ಇದೆ. ಹಲವು ಸಂತರ ತಪಸ್ಸಿನ ಫಲದಿಂದ ಮನಸ್ಸಿಗೆ ಕಾವಿ ತೊಟ್ಟ ಪ್ರಧಾನಮಂತ್ರಿ ನಮ್ಮ ದೇಶಕ್ಕೆ ಸಿಕ್ಕಿದ್ದಾರೆ. ಪರಂಪರೆಯ ಶಿಲ್ಪವನ್ನು ವಿದೇಶಿಗರ ಬೇಡಿಕೆಗೆ ಅನುಗುಣವಾಗಿ ಸಿದ್ಧಪಡಿಸಲು ಅಸಾಧ್ಯವಾಗಿದ್ದು, ಆಧುನಿಕ ಶಿಲ್ಪಗಳ ಮೂಲಕ ವಿದೇಶಿಗರ ಆಕರ್ಷಣೀಯ ಉತ್ಪನ್ನಗಳ ಸಿದ್ಧಪಡಿಸಲು ಯೋಜನೆಯನ್ನು ಬಳಸಿಕೊಳ್ಳಲು ಸಾಧ್ಯವಿದೆ. ಭಾರತದ ಪ್ರವಾಸೋದ್ಯಮ ಇಲಾಖೆಗೆ ಬರುವ ವಿದೇಶಿ ಆದಾಯದ ಶೇ.90 ಪಾಲು ವಿಶ್ವ ಬ್ರಾಹ್ಮಣರ ಶಿಲ್ಪಿಗಳ ಕೊಡುಗೆಯಿಂದ ಸಾಧ್ಯವಾಗಿದೆ ಎಂದರು.
ಮಹಾಸಂಸ್ಥಾನದ ವತಿಯಿಂದ ಹಾಗೂ ಮಾತೃಮಂಡಳಿ ವತಿಯಿಂದ ಸಚಿವರನ್ನು ಅಭಿನಂದಿಸಲಾಯಿತು. ಆನೆಗುಂದಿ ಪ್ರತಿಷ್ಠಾನ ಮತ್ತು ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಗೀತಾಂಜಲಿ ಎಂ.ಸುವರ್ಣ, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಸುಮಾ ಯು. ಶೆಟ್ಟಿ, ಕುತ್ಯಾರು ಗ್ರಾ.ಪಂ. ಅಧ್ಯಕ್ಷ ಜನಾರ್ದನ ಆಚಾರ್ಯ, ಮಾಜಿ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಕೃಷಿ ಅಧಿಕಾರಿ ಮೋಹನ್‌ರಾಜ್, ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ಅಸೆಟ್ ಅಧ್ಯಕ್ಷ ಬಿ. ಸೂರ್ಯಕುಮಾರ್ ಹಳೆಯಂಗಡಿ, ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಆನೆಗುಂದಿ ಮೂಲಮಠದ ಅಧ್ಯಕ್ಷ ದಿನೇಶ್ ಆಚಾರ್ಯ ಪಡುಬಿದ್ರಿ, ಗುರುಸೇವಾ ಪರಿಷತ್ ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ನಾಗಧರ್ಮ ಕೇಂದ್ರ ಸರಸ್ವತಿ ವೇದ ಸಂಜೀವಿನಿ ಪಾಠಶಾಲೆಯ ವಿದ್ಯಾರ್ಥಿಗಳಿಂದ ವೇದಘೋಷ ನಡೆಯಿತು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.