ರೈತ ಸಂಘಟನೆಗಳಿಂದ ಇಂದು ಬಂದ್, ತೀವ್ರಗೊಂಡ ಪ್ರತಿಭಟನೆ
ಬೆಂಗಳೂರು: ಜನರ ತೀವ್ರ ವಿರೋಧ ಇರುವ ಹೊರತಾಗಿಯೂ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ಸಲುವಾಗಿ ನಿತ್ಯ 3,500 ಕ್ಯೂಸೆಕ್ ನೀರು ಬಿಡಲು ಸರಕಾರ ತೀರ್ಮಾನಿಸಿದೆ. 5 ಸಾವಿರ ಕ್ಯೂಸೆಕ್‌ನಂತೆ ತಮಿಳುನಾಡಿಗೆ ನಿತ್ಯ ಕಾವೇರಿ ನೀರು ಹರಿಸುವಂತೆ ಗುರುವಾರ ಸುಪ್ರೀಂ ಕೋರ್ಟ್ ಆದೇಶಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರ ನಡುವೆ ರಾಜ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಬಿಡುಗಡೆ ಮಾಡುತ್ತಿರುವ ಮಾದರಿಯಲ್ಲೇ ಸೆ.26ರವರೆಗೆ ನಿತ್ಯ 3,500 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾವೇರಿ ನದಿ ನೀರು ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ಆಗಿರುವ ವಿಚಾರಣೆಯನ್ನು ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ಸೆ.26ರವರೆಗೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುವುದು. 8,000 ಕ್ಯುಸೆಕ್ ಒಳಹರಿವು ಇದೆ. ಈಗಾಗಲೇ 3,000-3,500 ಕ್ಯೂಸೆಕ್ ನೀರು ಹರಿದು ಹೋಗುತ್ತಿದೆ. ಸೆ.26 ತನಕ ನೀರು ಬಿಡಲಾಗುತ್ತದೆ. ನಾವು ರೈತರ ಹಿತರಕ್ಷಣೆಯನ್ನೂ ಮಾಡುತ್ತೇವೆ. ಕುಡಿಯುವ ನೀರಿನ ರಕ್ಷಣೆಯನ್ನು ಮಾಡುತ್ತೇವೆ ಎಂದು ಹೇಳಿದರು.
ಇಂದು ಬಂದ್
ಈ ನಡುವೆ ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಹೋರಾಟದ ಕಿಚ್ಚು ಮತ್ತಷ್ಟು ತೀವ್ರಗೊಂಡಿದೆ. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಹರಿಸದಂತೆ ಒತ್ತಾಯಿಸಿ ರೈತ ಸಂಘಟನೆಗಳು ಇಂದು ಮಂಡ್ಯ ಹಾಗೂ ಮದ್ದೂರಿನಲ್ಲಿ ಬಂದ್ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.
ರೈತ ಸಂಘಟನೆಗಳ ಬಂದ್ ಕರೆಗೆ ಎಲ್ಲ ಸಂಘಟನೆಗಳು ಬೆಂಬಲ ಘೋಷಿಸಿವೆ. ಈಗಾಗಲೇ ಎಲ್ಲಾ ಅಂಗಡಿ ಮುಂಗಟ್ಟು, ವಾಹನ ಸಂಚಾರ, ಶಾಲೆ ಕಾಲೇಜು ಬಂದ್ ಆಗಿವೆ. ತುರ್ತು ಮತ್ತು ಅಗತ್ಯ ಸೇವೆಗಳು ಮಾತ್ರ ಲಭ್ಯವಿದೆ ಎಂದು ತಿಳಿದುಬಂದಿದೆ.
ಭಾನುವಾರ ಮದ್ದೂರು ಕೂಡ ಸ್ತಬ್ಧ ಆಗಲಿದೆ. ಈ ಬಂದ್ ದಶಪಥದ ರಸ್ತೆಯ ಮೇಲೆ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿದ್ದು, ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಶನಿವಾರ ಅತ್ತಿಬೆಲೆ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಈಗಾಗಲೇ ತಮಿಳುನಾಡು ಗಡಿಯಲ್ಲಿ ರಸ್ತೆ ತಡೆಗಳು ಶುರುವಾಗಿವೆ. ಸಂಸದರ ಮನೆಗಳಿಗೆ ಮುತ್ತಿಗೆ ಹಾಕಲು ಕರವೇ ತೀರ್ಮಾನಿಸಿದೆ. ಕರವೇ ನಾರಾಯಣಗೌಡರ ಬಣ ಕರ್ನಾಟಕ ಬಂದ್‌ಗೆ ಕರೆ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಈ ನಡುವೆ ಬಿಜೆಪಿ ಬೆಂಗಳೂರು ಸೇರಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದೆ.