ಸ್ಕೂಟಿಯಲ್ಲಿ ಬಂದ ಕಳ್ಳ ಕೈಚೀಲ ಎಗರಿಸಿ ಪರಾರಿ
ಕಾರ್ಕಳ : ಬಂಗ್ಲೆಗುಡ್ಡೆ ಸಮೀಪ ಸೆ. 11ರ ರಾತ್ರಿ ಸ್ಕೂಟಿಯಲ್ಲಿ ಬಂದ ಕಳ್ಳನೊಬ್ಬ ಮೊಬೈಲ್ ಮತ್ತು ನಗದು ಹಣವಿದ್ದ ಮಹಿಳೆಯ ಕೈಚೀಲ ಕಸಿದುಕೊಂಡು ಪರಾರಿಯಾಗಿದ್ದಾನೆ. ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಪಕೀರಮ್ಮ(40) ಎಂಬವರು ಸ್ನೇಹಿತೆ ವೀಣಾ ಎಂಬವರ ಜತೆಗೆ ಕಾಬೆಟ್ಟುವಿನಲ್ಲಿರುವ ತನ್ನ ಮನೆಗೆ ರಾತ್ರಿ 8.40ರ ಹೊತ್ತಿಗೆ ನಡೆದುಕೊಂಡು ಹೋಗುತ್ತಿರುವಾಗ ಬಂಗ್ಲೆಗುಡ್ಡೆ ಬಳಿ ಹಿಂದಿನಿಂದ ಕಪ್ಪು ಬಣ್ಣದ ಸ್ಕೂಟಿಯಲ್ಲಿ ಬಂದ ಕಳ್ಳ ಕೈಚೀಲ ಕಸಿದುಕೊಂಡು ಪಲಾಯನ ಮಾಡಿದ್ದಾನೆ. ಕೈಚೀಲದಲ್ಲಿ 15,000 ರೂ. ಬೆಲೆಬಾಳುವ ಮೊಬೈಲ್ ಮತ್ತು 5,000 ರೂ. ನಗದು ಇತ್ತು ಎಂದು ಪಕೀರಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಭಾರತ್ ಫೈನಾನ್ಸ್ ಸಿಬ್ಬಂದಿಗೆ ಅಡುಗೆ ಮಾಡಿ ಹಾಕುವ ಕೆಲಸ ಮಾಡುತ್ತಿರುವ ಪಕೀರಮ್ಮ ಸೋಮವಾರ ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಮನೆ ಕಡೆ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಸ್ಕೂಟಿಯಲ್ಲಿ ಬಂದ ಕಳ್ಳ ಕಪ್ಪು ಬಣ್ಣದ ಟಿ-ಶರ್ಟ್ ಧರಿಸಿದ್ದ. ಕೈಚೀಲ ಕಸಿದುಕೊಂಡು ಬಂಗ್ಲೆಗುಡ್ಡೆ ಕಡೆಗೆ ಸಾಗಿ ಎಡಗಡೆಗೆ ತಿರುಗಿ ನಕ್ರೆ ಜಂಕ್ಷನ್ ಕಡೆಗೆ ಹೋಗಿದ್ದಾನೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.