ಸುಳ್ಯ : ಇಲ್ಲಿಗೆ ಸಮೀಪದ ಅಡ್ಕಾರಿನಲ್ಲಿ ಹೊಟೇಲ್ ಬಳಿ ಇಂದು ಬೆಳ್ಳಂಬೆಳಗ್ಗೆ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕರು ಕೆಲಸದ ನಿಮಿತ್ತ ನಿನ್ನೆ ಅಡ್ಕಾರಿಗೆ ಆಗಮಿಸಿ ಹೋಟೆಲ್ ಎದುರುಗಡೆ ಇರುವ ಅಂಗಡಿಯೊಂದರ ವರಾಂಡದಲ್ಲಿ ಆಶ್ರಯ ಪಡೆದಿದ್ದರು. ಅದರಲ್ಲಿ ನಾಲ್ಕು ಮಂದಿ ಕಾರ್ಮಿಕರು ರಸ್ತೆ ಬದಿ ನಿಂತಿದ್ದರೆನ್ನಲಾಗಿದೆ.
ಇಂದು ಬೆಳಗ್ಗೆ ಹುಣಸೂರು ಕಡೆಯಿಂದ ಬಂದ ಕಾರೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ರಸ್ತೆ ಬದಿ ನಿಂತಿದ್ದ ನಾಲ್ವರು ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದ ಲಾರಿಗೂ ಡಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ನಾಲ್ವರು ಕಾರ್ಮಿಕರು ಗಂಭೀರ ಸ್ಥಿತಿಯಲ್ಲಿದ್ದು, ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಚ್ಚಿನ ಮಾಹಿತಿಯ ಪ್ರಕಾರ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.





















