ಉಡುಪಿಯಲ್ಲಿ ಸಂಜೀವಿನಿ ಮಹಿಳೆಯರ ಸೂಪರ್‌ ಮಾರ್ಕೆಟ್‌ ಆರಂಭ

ಸ್ವಸಹಾಯ ಒಕ್ಕೂಟದ ಮಹಿಳೆಯರು ತಯಾರಿಸಿದ ಎಲ್ಲ ಉತ್ಪನ್ನಗಳು ಲಭ್ಯ

ಉಡುಪಿ : ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಮಹಿಳೆಯರೇ ಮಾರಾಟ ಮಾಡುವ ಸೂಪರ್‌ ಮಾರ್ಕೆಟ್‌ ಉಡುಪಿಯಲ್ಲಿ ನಿನ್ನೆ ಶುಭಾರಂಭಗೊಂಡಿದೆ. ಮಹಿಳಾ ಸಬಲೀಕರಣದ ಮೂಲಕ ಕುಟುಂಬದ ಆರ್ಥಿಕ ಬೆಳವಣಿಗೆ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ರಾಷ್ಟೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯ ಸೂಪರ್‌ ಮಾರ್ಕೆಟನನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೋಮವಾರ ಉದ್ಘಾಟಿಸಿದ್ದಾರೆ. ಇದೇ ಮೊದಲ ಬಾರಿಗೆ ಎಲ್ಲ ಸೇವೆಗಳನ್ನು ಒದಗಿಸುವ ಸೂಪರ್ ಮಾರ್ಕೆಟ್ ಉಡುಪಿಯ ಹೃದಯಭಾಗದ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಸೋಮವಾರ ಆರಂಭಿಸಲಾಗಿದೆ.
ಈ ಸೂಪರ್ ಮಾರ್ಕೆಟ್‌ನಲ್ಲಿ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಉತ್ತಮ ಗುಣಮಟ್ಟದ ಅಲಂಕಾರಿಕ, ಒಳಾಂಗಣ ಗಿಡಗಳು, ಯಕ್ಷಗಾನ ಮುಖವಾಡಗಳು ಹ್ಯಾಂಡ್ ಮೇಡ್ ಬ್ಯಾಗ್‌, ಕ್ಯಾಂಡಲ್, ಬಿದಿರಿನ ಬುಟ್ಟಿ , ಗ್ರೋ ಬ್ಯಾಗ್‌, ವಾಲ್‌ ಪೈಂಟಿಂಗ್‌,ಕೀ ಚೈನ್‌, ಜಿಐ ಟ್ಯಾಗ್‌ ಹೊಂದಿರುವ ಕೈ ಮಗ್ಗದ ಸೀರೆಗಳು, ಮಣ್ಣಿನ ಮಡಕೆ, ಡೋರ್ ಮ್ಯಾಟ್, ಪರಿಶುದ್ಧ ಜೇನುತುಪ್ಪ, ಕಜೆ ಅಕ್ಕಿ, ಸಾವಯವ ಬೆಲ್ಲ, ಫಿನೈಲ್, ಸೋಪ್ ಆಯಿಲ್, ಡಿಟರ್ಜೆಂಟ್, ದೇಸಿ ಗೋ ಉತ್ಪನ್ನಗಳು, ವಿವಿಧ ಬಗೆಯ ತಿಂಡಿ, ತಿನಿಸುಗಳು, ಪೂಜಾ ಸಾಮಗ್ರಿ, ಆರೋಗ್ಯಕರ ಪೇಯಗಳು, ಗುಣಮಟ್ಟದ, ಆರೋಗ್ಯಕರ, ಸಾವಯವ ಉತ್ಪನ್ನಗಳು ಲಭ್ಯವಿವೆ ಹೋಮ್‌ ಮೇಡ್‌ ಚಾಕೊಲೇಟ್‌, ಕೇಕ್‌, ಚಿಕ್ಕಿ, ಆಕರ್ಷಕ ಕಲಾಕೃತಿಗಳು ಇತ್ಯಾದಿ ವಸ್ತುಗಳು ಒಂದೇ ಸೂರಿನಡಿ ದೊರೆಯಲಿವೆ.
ಈ ಮಳಿಗೆಯನ್ನು ಉಡುಪಿ ತಾಲೂಕು ಪಂಚಾಯತ್ ಹಾಗೂ ನಬಾರ್ಡ್‌ ಸಂಸ್ಥೆಯ ಸಹಯೋಗದಲ್ಲಿ ಚೇರ್ಕಾಡಿ ಗ್ರಾಪಂನ ಪ್ರಗತಿ GPLFನ ಸಮೃದ್ಧಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರು ನಡೆಸಲಿದ್ದು, ಜಿಲ್ಲೆಯ ವಿವಿಧ ಸಂಜೀವಿನಿ ಸಂಘದ ಸದಸ್ಯರು ಉತ್ಪಾದಿಸಿರುವ ವಸ್ತುಗಳನ್ನು ಈ ಕೇಂದ್ರದ ಮೂಲಕ ಮಾರಾಟ ಮಾಡಲಿದ್ದಾರೆ. ಈ ಸೂಪರ್ ಮಾರ್ಕೆಟ್‌ನಲ್ಲಿ, ಸೇವಾ ಸಿಂಧು ಸೇವೆಗಳು, ಪಾಸ್‌ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಕಾರ್ಮಿಕರ ನೋಂದಣಿ ಇತ್ಯಾದಿ ಆನ್‌ಲೈನ್ ಸೇವೆಗಳು, ಶಿಕ್ಷಣ, ಬ್ಯೂಟಿಷಿಯನ್, ಟೈಲರಿಂಗ್, ಎಂಬ್ರಾಯಿಡರಿ, ಕುಚ್ಚು ಮೆಹಂದಿ, ಚಂಡೆ, ಯಕ್ಷಗಾನ, ಕ್ಯಾಟರಿಂಗ್, ಕಾನೂನು ಮತ್ತು ಆಪ್ತ ಸಲಹೆ, ಕ್ಯಾಟರಿಂಗ್, ಪೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿ, ಆರೋಗ್ಯ ಸಲಹೆ ಸೇವೆಗಳೂ ಸಹ ದೊರೆಯಲಿವೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ 155 ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳ ಮೂಲಕ ಒಟ್ಟು 7623 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಈ ಗುಂಪುಗಳಲ್ಲಿ 85 ಸಾವಿರಕ್ಕೂ ಅಧಿಕ ಸದಸ್ಯರಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ಸಮುದಾಯ ಬಂಡವಾಳ ನಿಧಿಯನ್ನು ಪಡೆದು ಅನೇಕ ರೀತಿಯ ಜೀವನೋಪಾಯ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.
ಜಿಲ್ಲೆಯ ಸಂಜಿವಿನಿ ಸ್ವ ಸಹಾಯ ಸಂಘದ ಮಹಿಳೆಯರಿಗೆ , ಜಿಲ್ಲಾ ಪಂಚಾಯತ್ ಮೂಲಕ ಸ್ವಉದ್ಯೋಗ ಆರಂಭಿಸಲು ಅಗತ್ಯವಿರುವ ತರಬೇತಿ ಮತ್ತು ಸಮುದಾಯ ಬಂಡವಾಳವನ್ನು ನೀಡುತ್ತಿದ್ದು, ಇದರಿಂದ ಈಗಾಗಲೇ ಹಲವು ರೀತಿಯ ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಅವರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ದೊರೆತಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಲಾಭ ಗಳಿಸಬಹುದಾಗಿದ್ದು, ಈ ನಿಟ್ಟಿನಲ್ಲಿ ಮಹಿಳೆಯರೇ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸೂಪರ್ ಮಾರ್ಕೆಟ್ ತೆರೆಯುತ್ತಿರುವುದು ಅವರ ಆರ್ಥಿಕ ಬೆಳವಣಗೆಗೆ ಮತ್ತಷ್ಟು ಸಹಕಾರವಾಗಲಿದೆ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಪ್ರಸನ್ನ ತಿಳಿಸಿದ್ದಾರೆ.







































































































































error: Content is protected !!
Scroll to Top