ಅಪಾರ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ ಒಟ್ಟಾದರೆ ರಾಷ್ಟ್ರದ ಕನಸು ನನಸು
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದಿಲ್ಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು. ಇದಕ್ಕೂ ಮುನ್ನ ರಾಜ್‌ಘಾಟ್‌ಗೆ ತೆರಳಿ ಮೋದಿ ನಮನ ಸಲ್ಲಿಸಿದರು.
ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದ ನಂತರ ಐಎಎಫ್ ಹೆಲಿಕಾಪ್ಟರ್ ಪುಷ್ಪವೃಷ್ಟಿ ಮಾಡಿತು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಈಗ ಜನಸಂಖ್ಯೆಯ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ದೇಶ ಭಾರತ. ಇಷ್ಟು ದೊಡ್ಡ ದೇಶ, ನನ್ನ ಕುಟುಂಬದ 140 ಕೋಟಿ ಸದಸ್ಯರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಏಂದು ಮೋದಿ ಶೂಭ ಹಾರೈಸಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿದ ಎಲ್ಲ ಕೆಚ್ಚೆದೆಯ ಹೃದಯಗಳಿಗೆ ನಾನು ಗೌರವ ಸಲ್ಲಿಸುತ್ತೇನೆ ಎಂದ ಅವರು, ಮಣಿಪುರದಲ್ಲಿ ಶಾಂತಿ ನೆಲೆಸಬೇಕು ಎಂದು ಕೆಂಪು ಕೋಟೆಯಿಂದ ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮನವಿ ಮಾಡಿದರು.
ದೇಶ ಮಣಿಪುರದ ಜನರೊಂದಿಗೆ ನಿಂತಿದೆ. ಶಾಂತಿಯಿಂದ ಮಾತ್ರ ಯಾವುದೇ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರ ಕಂಡುಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
ಈ ಬಾರಿ, ನೈಸರ್ಗಿಕ ವಿಕೋಪ ದೇಶದ ಹಲವಾರು ಭಾಗಗಳಲ್ಲಿ ಊಹಿಸಲಾಗದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಇದರಿಂದ ಸಂಕಷ್ಟಕ್ಕೀಡಾದ ಎಲ್ಲ ಕುಟುಂಬಗಳಿಗೆ ನಾನು ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ. ಇಂದು ನಾವು ಅಪಾರ ಜನಸಂಖ್ಯೆ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯನ್ನು ಹೊಂದಿದ್ದೇವೆ. ಈ ಮೂರೂ ಒಟ್ಟಾದರೆ ರಾಷ್ಟ್ರದ ಕನಸುಗಳನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದರು.
ನಾನು ಕಳೆದ 1000 ವರ್ಷಗಳ ಬಗ್ಗೆ ಮಾತನಾಡುತ್ತಿದ್ದೇನೆ. ಏಕೆಂದರೆ, ದೇಶದ ಮುಂದೆ ಮತ್ತೊಮ್ಮೆ ಅವಕಾಶವಿದೆ ಎಂದು ನಾನು ನೋಡುತ್ತೇನೆ. ಈ ಯುಗದಲ್ಲಿ ನಾವು ಏನು ಮಾಡುತ್ತೇವೆ, ಒಂದರ ನಂತರ ಒಂದರಂತೆ ನಾವು ತೆಗೆದುಕೊಳ್ಳುವ ಕ್ರಮಗಳು ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳು ಮುಂಬರುವ 1000 ವರ್ಷಗಳಲ್ಲಿ ದೇಶದ ಸುವರ್ಣ ಇತಿಹಾಸವನ್ನು ರೂಪಿಸುತ್ತವೆ ಎಂದರು.






































































