ಚಾಕೊಲೇಟ್ ಮೂಲಕ ಗಾಂಜಾ ತಿನ್ನಿಸುತ್ತಿದ್ದ ಪಾತಕಿಗಳು
ಮಂಗಳೂರು : ಕೆಲ ದಿನಗಳ ಹಿಂದೆ ನಗರದ ಎರಡು ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದ್ದ ಬಾಂಗ್ ಚಾಕೊಲೇಟ್‌ಗಳಲ್ಲಿ ಗಾಂಜಾ ಅಂಶ ಇರುವುದು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಚಾಕೊಲೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತರನ್ನು ವಿ.ಟಿ. ರೋಡ್‌ನ ಮನೋಹರ ಶೇಟ್ (49) ಮತ್ತು ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ (45) ಎಂದು ಗುರುತಿಸಲಾಗಿದೆ. ಜು. 19ರಂದು ಮಂಗಳೂರು ನಗರದ ಉತ್ತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ನಗರದ ಕಾರ್‌ಸ್ಟ್ರೀಟ್‌ನಲ್ಲಿ ಪೂಜಾ ಪ್ಯಾಲೇಸ್ ಕಟ್ಟಡದಲ್ಲಿರುವ ವೈಭವ್ ಪೂಜಾ ಸೇಲ್ಸ್ ಎಂಬ ಅಂಗಡಿ ಮಾಲಕ ಮನೋಹರ್ ಶೇಟ್ ಮಾರಾಟ ಮಾಡುತ್ತಿದ್ದ 48,000 ರೂ. ಮೌಲ್ಯದ ತಲಾ 40 ಬಾಂಗ್ ಚಾಕೊಲೇಟ್ ತುಂಬಿರುವ 300 ಸ್ಯಾಚೆಟ್‌ಗಳನ್ನು ಮತ್ತು 592 ಬಿಡಿ ಚಾಕೊಲೇಟ್‌ಗಳು ಸೇರಿದಂತೆ ಒಟ್ಟು 12,592 ಬಾಂಗ್ ಚಾಕಲೆಟ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದರು.
ಅದೇ ದಿನ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಅಧಿಕಾರಿ, ಸಿಬಂದಿಯವರು ಕಾರ್ಯಾಚರಣೆ ನಡೆಸಿ ನಗರದ ಹೈಲ್ಯಾಂಡ್ ಬಳಿ ಗೂಡಂಗಡಿಯಲ್ಲಿ ಬಾಂಗ್ ಮಿಶ್ರಿತ ಚಾಕೊಲೇಟನ್ನು ಮಾರಾಟ ಮಾಡುತ್ತಿದ್ದ ಆರೋಪಿ ಬೆಚನ್ ಸೋನ್ಕರ್ ಎಂಬಾತನ ವಶದಿಂದ 5,500 ರೂ. ಮೌಲ್ಯದ ಬಾಂಗ್ ಚಾಕೊಲೇಟ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದರು.
ಆ ಚಾಕೊಲೇಟ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಅದರಲ್ಲಿ ಗಾಂಜಾ ಅಂಶವಿರುವುದಾಗಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಬಂದಿರುವುದರಿಂದ ಆರೋಪಿತರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಲಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.






































































