ಪತ್ನಿ ಜತೆ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ತಡೆದು ಕಿರುಕುಳ
ಮಂಗಳೂರು: ಬಿ.ಸಿ. ರೋಡ್ನಲ್ಲಿ ಪೊಲೀಸ್ ಸಿಬ್ಬಂದಿ ಮೇಲೆಯೇ ನೈತಿಕ ಪೊಲೀಸ್ಗಿರಿ ನಡೆದ ಘಟನೆ ಸಂಭವಿಸಿದೆ. ಪತ್ನಿಯ ಜತೆ ನಡೆದುಕೊಂಡು ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಮುಸ್ಲಿಮ್ ವ್ಯಕ್ತಿ ಎಂದು ಭಾವಿಸಿ ಗುರುವಾರ ರಾತ್ರಿ ಹಲ್ಲೆ ಮಾಡಲಾಗಿತ್ತು. ನೈತಿಕ ಪೊಲೀಸ್ ಗಿರಿ ಮಾಡಿದ್ದ ಇಬ್ಬರನ್ನು ಬಂಧಿಸಲಾಗಿದೆ.
ಕುಡಿತದ ಅಮಲಿನಲ್ಲಿದ್ದ ಆರೋಪಿ ಮನೀಶ್ ಮತ್ತು ಮಂಜುನಾಥ್ ಮುಸ್ಲಿಂ ಎಂದು ಭಾವಿಸಿ ಪೊಲೀಸ್ ಸಿಬ್ಬಂದಿ ಕುಮಾರ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ. ಕುಮಾರ್ ಹೋಟೆಲ್ನಲ್ಲಿ ಊಟ ಮುಗಿಸಿ ಪತ್ನಿ ಮತ್ತು ಆಕೆಯ ಸಹೋದರಿಯನ್ನು ತನ್ನ ಕ್ವಾರ್ಟರ್ಸ್ಗೆ ಬಿಡಲು ಹೋಗುತ್ತಿದ್ದಾಗ ಆರೋಪಿಗಳು ಪೊಲೀಸ್ ಸಿಬ್ಬಂದಿಯನ್ನು ಹಿಂಬಾಲಿಸಿದ್ದಾರೆ. ಕುಮಾರ್ ಹೆಂಡತಿ ಮತ್ತು ಆಕೆಯ ಸಹೋದರಿಯನ್ನು ಬಿಟ್ಟು ತನ್ನ ಕರ್ತವ್ಯಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಅಡ್ಡಗಟ್ಟಿ, ಮಹಿಳೆಯರ ಸಹವಾಸದಲ್ಲಿ ಏಕೆ ಇದ್ದಿ ಎಂದು ನಿಂದಿಸಿ ಕಿರುಕುಳ ನೀಡಿದ್ದಾರೆ.
ಗಲಾಟೆ ಕೇಳಿ ಕುಮಾರ್ ಪತ್ನಿ ಮನೆಯಿಂದ ಹೊರಬಂದಾಗ ಆರೋಪಿಗಳು ಅವರನ್ನೂ ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಈ ವೇಳೆ ತಾನು ಪೊಲೀಸ್ ಎಂದು ಕುಮಾರ್ ಅವರಿಗೆ ಹೇಳಿದ್ದು ಅವರು ನನ್ನ ಹೆಂಡತಿ ಮತ್ತು ಅತ್ತಿಗೆ ಎಂದು ಹೇಳಿದ್ದಾರೆ. ಆರೋಪಿಗಳ ಮೇಲೆ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿದೆ.






























































