ಹೈಕಮಾಂಡ್ ಚಿಂತೆಗೆ ಕಾರಣವಾದ ನಾಯಕರ ಕಚ್ಚಾಟ
ಬೆಂಗಳೂರು : ಕರ್ನಾಟಕ ಕಾಂಗ್ರೆಸ್ನಲ್ಲಿ ಕಚ್ಚಾಡುತ್ತಿರುವ ನಾಯಕರ ನಡುವೆ ಸಮನ್ವಯತೆ ಮೂಡಿಸಲು ಹೈಕಮಾಂಡ್ ಆಗಸ್ಟ್ 2ರಂದು ದಿಲ್ಲಿಯಲ್ಲಿ ರಾಜ್ಯ ನಾಯಕರ ಸಭೆ ಕರೆದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರೊಂದಿಗೆ ಸಭೆ ನಡೆಯಲಿದೆ. ಇತ್ತೀಚೆಗೆ ಮುಖ್ಯಮಂತ್ರಿ ವಿರುದ್ಧ ಅಸಮಾಧಾನ ಹೊರಹಾಕಿದ್ದ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಅವರಿಗೂ ಬುಲಾವ್ ನೀಡಿದೆ.
ಮಧ್ಯಾಹ್ನ 2 ಗಂಟೆಗೆ ನಡೆಯುವ ರಾಜ್ಯ ನಾಯಕರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಭಾಗಿಯಾಗಲಿದ್ದಾರೆ. ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರೇ ಅಸಮಧಾನ ಹೊರಹಾಕುತ್ತಿದ್ದು, ಇದನ್ನು ತಣಿಸುವ ನಿಟ್ಟಿನಲ್ಲಿ ಸಭೆ ಕರೆಯಲಾಗಿದೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಇದರ ತಯಾರಿ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.
ಈಡಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ನೀಡದ ಬಗ್ಗೆ ಅಸಮಾಧನ ಹೊರಹಾಕಿದ್ದ ಬಿಕೆ ಹರಿಪ್ರಸಾದ್, ಸಿಎಂ ಆಯ್ಕೆ ಮಾಡುವುದು ಗೊತ್ತು, ಕೆಳಗಿಳಿಸುವುದು ಗೊತ್ತು ಎಂದು ಸಿದ್ದರಾಮಯ್ಯ ಅವರ ಹೆಸರು ಹೇಳದೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಈ ಹೇಳಿಕೆ ರಾಜ್ಯ ಕಾಂಗ್ರೆಸ್ಗೆ ಮುಜುಗರ ಉಂಟು ಮಾಡಿದ್ದಲ್ಲದೆ, ಆಂತರಿಕ ಚರ್ಚೆಗೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಮುಸುಕಿನ ಗುದ್ದಾಟ ಸ್ಫೋಟಗೊಳ್ಳಲು ಆರಂಭವಾಯಿತು. ಬಸವರಾಜ ರಾಯರೆಡ್ಡಿ ಮತ್ತು ಇತರ ಶಾಸಕರು ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದರು. ಈ ವಿಚಾರ ತಿಳಿದ ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ನಲ್ಲಿ ಉರಿಯುತ್ತಿರುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಲಾರಂಭಿಸಿದೆ. ಬೀಸುವ ದೊಣ್ಣೆಯಿಂದ ಪಾರಾಗಲು ಕಾಂಗ್ರೆಸ್ ನಾಯಕರು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಪತ್ರ ಬರೆದಿದ್ದಾರೆ ಎಂದು ಹೇಳಿ ಶಾಸಕರ ದೂರಿಗೆ ತೇಪೆಹಚ್ಚುವ ಕೆಲಸ ಮಾಡಿದ್ದರು.
ಬೀಸುವ ದೋಣ್ಣೆಯಿಂದ ಪಾರಾದೆವು ಎಂದು ಭಾವಿಸಿದ್ದ ರಾಜ್ಯ ಕೈ ನಾಯಕರಿಗೆ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರದ್ದು ಎನ್ನಲಾದ ಪತ್ರ ಬೆವರಿಳಿಸಿತ್ತು. ಅನುದಾನ ಬಿಡುಗಡೆ ಮಾಡಲು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಮೂರನೇ ವ್ಯಕ್ತಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಪಾಟೀಲ್ ಅವರು ಸಿದ್ದರಾಮಯ್ಯ ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಬಹಿರಂಗವಾಗಿತ್ತು. ಇದರು ತೀವ್ರ ಚರ್ಚೆಗೂ ಕಾರಣವಾಗಿದೆ.



































