ನಲ್ಲೂರು ಪಂಚಾಯತ್ ಗ್ರಾಮ ಸಭೆ

ಗ್ರಾಮೀಣ ಪ್ರದೇಶಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಗ್ರಾಮಸ್ಥರ ಆಗ್ರಹ

‌ಕಾರ್ಕಳ : ಗ್ರಾಮಾಂತರ ಪ್ರದೇಶಗಳಿಗೆ ಬಸ್‌ ವ್ಯವಸ್ಥೆ ಇಲ್ಲದ ಕಾರಣ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕೆಂಬ ಆಗ್ರಹ ನಲ್ಲೂರು ಪಂಚಾಯತ್‌ ಗ್ರಾಮಸಭೆಯಲ್ಲಿ ಕೇಳಿಬಂತು.
ಜು. 19ರಂದು ಗ್ರಾ.ಪಂ. ಅಧ್ಯಕ್ಷೆ ಕವಿತಾ ಅವರ ಅಧ್ಯಕ್ಷತೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀರಲುಪೇಟೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಆನಂದ ಶೆಟ್ಟಿ, ನಲ್ಲೂರು ಭಾಗಕ್ಕೆ ಬಸ್‌ ವ್ಯವಸ್ಥೆಯಿಲ್ಲದೇ ಶಾಲಾ ಮಕ್ಕಳು ಮತ್ತು ಶಿಕ್ಷಕರು ಪರದಾಡುವಂತಾಗಿದೆ. ಶೀಘ್ರವೇ ಇಲ್ಲಿಗೆ ಬಸ್‌ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದರು. ಈ ವೇಳೆ ಅನೇಕರು ಧ್ವನಿಗೂಡಿಸಿದರು.

ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತ
90ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ನಲ್ಲೂರು ಶಾಲೆಯಲ್ಲಿ ಇಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅತಿಥಿ ಶಿಕ್ಷಕರ ನೇಮಕವೂ ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಹೀಗಾದಲ್ಲಿ ಸರಕಾರಿ ಶಾಲಾ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.

ಹೊಂಡ ಮುಚ್ಚಿ
ಆರ್‌ಕೆ ನಗರ ರಾಜ್ಯ ಹೆದ್ದಾರಿ ಬದಿ ಬೃಹತ್ ಹೊಂಡವಿದೆ. ವಾಹನಗಳು ಈ ಹೊಂಡಕ್ಕೆ ಬೀಳುವ ಅಪಾಯವಿದೆ. ಶಾಲಾ ಮಕ್ಕಳು ಇದೇ ದಾರಿಯಾಗಿ ಓಡಾಟ ಮಾಡುತ್ತಿದ್ದಾರೆ. ಅಪಾಯಕಾರಿಯಾಗಿರುವ ಈ ಹೊಂಡವನ್ನು ಮುಚ್ಚಿ ಸಮತಟ್ಟುಗೊಳಿಸುವ ಕಾರ್ಯವಾಗಬೇಕೆಂದು ನಿವೃತ್ತ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಆಗ್ರಹಿಸಿದರು.
ಉಳಿದಂತೆ ನಲ್ಲೂರು ಕ್ರಾಸ್‌ನಿಂದ ಪರಪ್ಪಾಡಿವರೆಗೆ ಬೀದಿದೀಪ ಅಳವಡಿಸುವಂತೆ, ಕೊರಿಯಾಲು ಪರಿಸರ ರಸ್ತೆ ದುರಸ್ತಿಪಡಿಸುವಂತೆ ಗ್ರಾಮಸ್ಥರು ಸಭೆಯಲ್ಲಿ ಮನವಿ ಮಾಡಿಕೊಂಡರು. ಇಲಾಖಾಧಿಕಾರಿಗಳಾದ ವಿದ್ಯಾಲಕ್ಷ್ಮಿ, ಸುಷ್ಮಾ, ವಸಂತ್‌, ಜಾರಪ್ಪ, ಪೂರ್ಣೇಶ್‌, ಕುಮಾರ್‌ ತಮ್ಮ ತಮ್ಮ ಇಲಾಖೆ ಬಗೆಗಿನ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಪಂಚಾಯತ್‌ ಉಪಾಧ್ಯಕ್ಷ ಜಯಕೀರ್ತೀ, ಸದಸ್ಯರಾದ ರತ್ನ, ದೀಪಶ್ರೀ, ಕುಸುಮ, ತಾರಾ, ಶೋಭಾ, ನಳಿನಿ, ಅಶೋಕ್‌, ಸುಮಿತ್‌, ಲೋಕೇಶ್‌ ಶೆಟ್ಟಿ , ಮಾತೃ‍ಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.





























































































































error: Content is protected !!
Scroll to Top