ಸದನದಲ್ಲಿ ಅಶಿಸ್ತಿನ ವರ್ತನೆ – ಅಧಿವೇಶನದಿಂದ 10 ಬಿಜೆಪಿ ಶಾಸಕರು ಅಮಾನತು

ಬೆಂಗಳೂರು : ಸದನದಲ್ಲಿ ಅಗೌರವ ಹಾಗೂ ಅಶಿಸ್ತಿನಿಂದ ನಡೆದುಕೊಂಡ ಹಿನ್ನಲೆಯಲ್ಲಿ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಈ ವಿಧಾನಸಭಾ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಆದೇಶ ಹೊರಡಿಸಿದ್ದಾರೆ. ಅಧಿವೇಶನ ಜು. 21 ರಂದು ಕೊನೆಗೊಳ್ಳಲಿದೆ

ಅಮಾನತುಗೊಂಡ ಶಾಸಕರು
ಆರ್. ಅಶೋಕ್, ಆರಗ ಜ್ಞಾನೇಂದ್ರ, ವಿ. ಸುನಿಲ್ ಕುಮಾರ್, ಅರವಿಂದ ಬೆಲ್ಲದ, ಧೀರಜ್ ಮುನಿರಾಜು, ಭರತ್ ಶೆಟ್ಟಿ, ಡಾ. ಅಶ್ವತ್ಥ ನಾರಾಯಣ, ಉಮಾನಾಥ ಕೋಟ್ಯಾನ್, ಯಶ್ ಪಾಲ್ ಸುವರ್ಣ, ವೇದವ್ಯಾಸ ಕಾಮತ್ ಅವರು ಸೇರಿದ್ದಾರೆ. ಕರ್ನಾಟಕ ವಿಧಾನಸಭೆ ಕಾರ್ಯವಿಧಾನ ಹಾಗೂ ನಡಾವಳಿ ನಿಯಮ 348 ಮೇರೆಗೆ ಅಮಾನತು ಮಾಡಲಾಗಿದೆ. ಈ ಪ್ರಸ್ತಾವಕ್ಕೆ ಸ್ಪೀಕರ್ ಖಾದರ್ ಅಂಗೀಕಾರ ನೀಡಿದರು ಹಾಗೂ ಸದಸ್ಯರನ್ನು ಸದನದಿಂದ‌ ಹೊರಗೆ ಹೋಗುವಂತೆ ಸೂಚಿಸಿದರು.

ಸದನದ ಬಾವಿಗಿಳಿದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಬಿಜೆಪಿ ಶಾಸಕರು ಬಜೆಟ್ ಪ್ರತಿಗಳ ಕಾಗದಗಳನ್ನು ಹರಿದು ಚೂರು ಮಾಡಿ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದಿದ್ದರು. ಸದನದ ಬಾವಿಗಿಳಿದು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಧರಣಿ ನಡೆಸಿದರು. ಸ್ಪೀಕರ್ ಭೋಜನ ವಿರಾಮ ರದ್ದುಪಡಿಸಿ ಕಲಾಪ ಮುಂದುವರಿಸಿದರು. ಬಜೆಟ್ ಮೇಲಿನ ಚರ್ಚೆ ಮುಂದುವರಿಸಲಾಗಿದ್ದು, ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡುತ್ತಿದ್ದರು. ರಾಜ್ಯ ಸರಕಾರದ ಐದು ಗ್ಯಾರಂಟಿ ಮತ್ತು ಇತರ ಯೋಜನೆಗಳನ್ನು ಹೊಗಳುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ಮುಂದುವರಿಸಿದ್ದರು.

ಉಪಸಭಾಧ್ಯಕ್ಷರು ಸ್ಪೀಕರ್ ಪೀಠದಲ್ಲಿ ಕುಳಿತಿದ್ದರು. ಬಿಜೆಪಿ ಶಾಸಕರು ಬಜೆಟ್ ಪ್ರತಿಗಳನ್ನ ಹರಿದು ಚೂರು ಮಾಡಿ ಎಸೆದಿದ್ದರು. ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಆಕ್ರೋಶ ಹೊರ ಹಾಕಿದ್ದು, ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರಿಗೆ ಈ ರೀತಿ ವರ್ತನೆ ತೋರಿ ಅವಮಾನ ಮಾಡಬೇಡಿ ಎಂದರು. ಸಭೆಯನ್ನು 3 ಗಂಟೆಗೆ ಮುಂದೂಡಿದ್ದರು.
ಕಾಂಗ್ರೆಸ್ ಶಾಸಕರು ಮತ್ತು ಸಚಿವರು ದಲಿತ ಸಮುದಾಯಕ್ಕೆ ಸೇರಿದ ಉಪಸಭಾಪತಿ ಅವರ ವಿರುದ್ಧ ಈ ರೀತಿ ವರ್ತನೆ ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ.













































































error: Content is protected !!
Scroll to Top