ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ವಾರ್ಷಿಕ ಮಹಾಸಭೆ
ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಜು. 9ರಂದು ಬೆಳಿಗ್ಗೆ 10.00 ಗಂಟೆಗೆ ದೇವಸ್ಥಾನದ ಶ್ರೀ ನಾಗಧರ್ಮೇಂದ್ರ ಸ್ವಾಮಿ ಕಲಾ ಮಂಟಪದಲ್ಲಿ ನಡೆಯಿತು. ಪುರೋಹಿತ್ ವೇಲಾಪುರಿ ವಿಶ್ವನಾಥ ಶರ್ಮ ಬೇಲೂರು ಮಾತನಾಡಿ, ಸಂಘದಿಂದ ಸಂಘಟನೆಗಳು ಬೆಳೆಯುತ್ತದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಧರ್ಮ ಜಾಗೃತಿಯ ಕಾರ್ಯಕ್ರಮಗಳು ನಿರಂತರ ನಡೆಯಬೇಕು, ಎಲ್ಲಾ ಸಮಿತಿಯವರು ಸಮಾನ ಮನಸ್ಕರಾದರೆ ಮಾತ್ರ ದೇವಸ್ಥಾನದ ಅಭಿವೃದ್ಧಿ ಮತ್ತು ಸಂಘಟನೆಗಳು ಬೆಳೆಯುವಲ್ಲಿ ಸಾಧ್ಯವಾಗುತ್ತದೆ. ಎಲ್ಲರ ಸಹಕಾರದಿಂದ ದೇವಸ್ಥಾನದ ಆಡಳಿತವು ಸುಲಭವಾಗುವುದು. ದೇವರ ಸೇವೆ ಮಾಡುವ ಅವಕಾಶ ದೊರೆಯುವುದೇ ಒಂದು ಪುಣ್ಯ ಕಾರ್ಯ. ದೇವಸ್ಥಾನದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಖಂಡಿತವಾಗಿಯು ನಮಗೆ ಪ್ರತಿಫಲ ದೊರಕುತ್ತದೆ. ಆ ನಿಟ್ಟಿನಲ್ಲಿ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಲ್ಲಿ ಮಾತ್ರ ನಾವು ಯಶಸ್ಸನ್ನು ಕಾಣಬಹುದು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ವಹಿಸಿದ್ದರು. ಆಡಳಿತ ಮಂಡಳಿಯ ವರದಿಯನ್ನು ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ ಮತ್ತು ಲೆಕ್ಕ ಪತ್ರವನ್ನು ಸುರೇಶ ಆಚಾರ್ಯ ಮಂಡಿಸಿದರು.

ನೂತನ ಆಡಳಿತ ಮಂಡಳಿ ಚುನಾವಣೆ
ನೂತನ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಡಳಿತ ಮೊಕ್ತೇಸರರಾಗಿ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಜೊತೆ ಮೊಕ್ತೇಸರರಾಗಿ ಪಿ.ರವಿ ಮತ್ತು ಸುರೇಶ ಆಚಾರ್ಯರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು.
ಅಧ್ಯಕ್ಷೀಯ ಮಾತುಗಳನ್ನಾಡಿದ ಶಿಲ್ಪಿ ರಾಮಚಂದ್ರ ಆಚಾರ್ಯ, ದೇವಸ್ಥಾನದ ಅಭಿವೃದ್ಧಿಯು ಎಲ್ಲರ ಸಹಕಾರ ಮತ್ತು ಸಮಾನ ಮನಸ್ಸಿನಿಂದ ಮಾತ್ರ ಸಾಧ್ಯ. ಕೇವಲ ಆಡಳಿತ ಮಂಡಳಿಯ ನಿರ್ಧಾರದಿಂದ ಯಾವುದೇ ಯೋಜನೆಗಳು ಯಶಸ್ವಿಯಾಗುವುದಿಲ್ಲ. ಕೂಡುವಳಿಕೆ ಮೊಕ್ತೇಸರರು ಇನ್ನೂ ಹೆಚ್ಚಿನ ರೀತಿಯಲ್ಲಿ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಹಕಾರ ನೀಡಬೇಕೆಂದರು. ಸಭಿಕರ ಪರವಾಗಿ ನಳಿನಿ ವಿಜೇಂದ್ರ, ಕೆ.ಸತೀಶ್ ಆಚಾರ್ಯ ದಾನಶಾಲೆ, ಮತ್ತು ನಿತ್ಯಾನಂದ ಆಚಾರ್ಯ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಾರ್ಥನೆಯನ್ನು ಪ್ರಧಾನ ಆರ್ಚಕರಾದ ವಿಠಲ ಪುರೋಹಿತ್ ನೆರವೇರಿಸಿ, ಕಟ್ಟೆಮಾರ್ ರತ್ನಾಕರ ಆಚಾರ್ಯ ಸ್ವಾಗತಿಸಿದರು. ಪಿ. ವಸಂತ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಸಲಹಾ ಸಮಿತಿಯ ಸದಸ್ಯ ವಿಶ್ವನಾಥ ಆಚಾರ್ಯ ವಂದಿಸಿದರು.






































