ವಿಬಿಎಸ್‌ ಸಭಾ ವತಿಯಿಂದ ವ್ಯಕ್ತಿತ್ವ ವಿಕಸನ ಶಿಬಿರ – ವಿದ್ಯಾರ್ಥಿ ವೇತನ ವಿತರಣೆ

ಕಾರ್ಕಳ : ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಮೂಲಕ ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುವುದು ಎಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಅಭಿಪ್ರಾಯಪಟ್ಟರು. ಅವರು ಜು. 2ರಂದು ವಿಬಿಎಸ್ ಸಭಾ ವತಿಯಿಂದ ಪೆರ್ವಾಜೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ಗಣೇಶ್ ಜಾಲ್ಸೂರು ಸಂಪನ್ಮೂಲ ವ್ಯಕ್ತಿಯಾಗಿ, ವಿಕಸನದ ಆರು ಸೂತ್ರಗಳನ್ನು ತಿಳಿಸುತ್ತಾ ಶಾರೀರಿಕ ಸಾಮರ್ಥ್ಯ, ಭಾವನಾತ್ಮಕ ಸಂಬಂಧ, ಮನಸ್ಸಿನ ಶುದ್ಧತೆ, ಆರ್ಥಿಕ ಮಿತವ್ಯಯ, ಪರಿವರ್ತನೆ ಮತ್ತು ಸಮರ್ಪಣೆಯ ಬಗ್ಗೆ ವಿದ್ಯಾರ್ಥಿಗಳು ತನ್ನನ್ನು ತಾನು ತೊಡಗಿಸಿಕೊಳ್ಳುವುದರ ಜೊತೆಗೆ ಪೋಷಕರ ಪಾತ್ರದ ಬಗ್ಗೆ ವಿವರಣಾತ್ಮಕ ಉಪಯುಕ್ತ ಮಾಹಿತಿಯನ್ನು ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಬಿಎಸ್ ಸಭಾದ ಅಧ್ಯಕ್ಷ ಬಿ. ಪ್ರಕಾಶ್ ಆಚಾರ್ಯ, ವಿದ್ಯಾರ್ಥಿಗಳು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ವಿದ್ಯಾರ್ಜನೆ ಮಾಡಬೇಕು. ಶಿಸ್ತುಬದ್ಧ ಜೀವನ ರೂಪಿಸಿಕೊಂಡಲ್ಲಿ ಯಾವುದೇ ರಂಗದಲ್ಲಿ ಯಶಸ್ಸು ಗಳಿಸಲು ಸಾಧ್ಯವೆಂದರು.

ಸನ್ಮಾನ
ಈ ಸಂದರ್ಭದಲ್ಲಿ ಸಮಾಜದ ಪ್ರಥಮ ,ದ್ವಿತೀಯ, ಪಿಯು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಎಸ್ಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕಿಂತ ಅಧಿಕ ಅಂಕ ಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಜೊತೆ ಮೊಕ್ತೇಸರರಾದ ಪಿ. ರವಿ ಆಚಾರ್ಯ, ನಿಟ್ಟೆ ಸುರೇಶ್ ಆಚಾರ್ಯ, ಉದ್ಯಮಿ ಯಜ್ನೇಶ್ ಆಚಾರ್ಯ ಕುತ್ಯಾರ್, ಉದ್ಯಮಿ ಸತೀಶ್ ಆಚಾರ್ಯ ಸಾಲ್ಮರ, ಶಶಿರೇಖಾ ಪ್ರಭಾಕರ ಆಚಾರ್ಯ, ರಮಾನಾಥ ಆಚಾರ್ಯ, ನಾಗರತ್ನ ಸಾಲ್ಮರ, ಸುಧಾಕರ ಆಚಾರ್ಯ ಬಂಗ್ಲೆಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿ. ವಸಂತ ಆಚಾರ್ಯ ಸ್ವಾಗತಿಸಿ, ವಿಶ್ವನಾಥ ಆಚಾರ್ಯ ನಿರೂಪಿಸಿದರು. ಶಿಲ್ಪಿ ಭಾಸ್ಕರ್ ಆಚಾರ್ಯ ವಂದಿಸಿದರು.











































































error: Content is protected !!
Scroll to Top