ಒಂಟಿ ಮಹಿಳೆ ಕೊಲೆ ಪ್ರಕರಣ : ಏಳು ಆರೋಪಿಗಳ ಬಂಧನ

ಮಗನ ಮೆಡಿಕಲ್‌ ಸೀಟಿಗಾಗಿ ಇಟ್ಟಿದ್ದ 35 ಲ.ರೂ.ಗಾಗಿ ಕೊಲೆ ಮಾಡಿದ್ದ ಆರೋಪಿಗಳು

ಶಿವಮೊಗ್ಗ: ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಒಂಟಿ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ನೀರಾವರಿ ಇಲಾಖೆ ಇಂಜಿನಿಯರ್‌ ಆಗಿರುವ ಗಂಡ ಗೋವಾಕ್ಕೆ ತೆರಳಿದ ಸಂದರ್ಭ ನೋಡಿಕೊಂಡು ಮನೆಗೆ ನುಗ್ಗಿ ಮಹಿಳೆಯನ್ನು ಕೊಂದು ಮನೆಯಲ್ಲಿದ್ದ ನಗದು ದರೋಡೆ ಮಾಡಲಾಗಿತ್ತು. ಆ ಬಳಿಕ ಅವರ ಕಾರು ಚಾಲಕ ನಾಪತ್ತೆಯಾಗಿದ್ದ.‌ ಶಿವಮೊಗ್ಗ ಪೊಲೀಸರು ಪ್ರಕರಣ ಬೇಧಿಸಿ 33 ಲಕ್ಷ ರೂ. ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
ಜೂನ್ 17ರ ಮಧ್ಯಾಹ್ನ 3.30ರ ಹೊತ್ತಿಗೆ ಶಿವಮೊಗ್ಗದ ವಿಜಯನಗರ ಬಡಾವಣೆಯಲ್ಲಿರುವ ಮನೆಯೊಂದರಲ್ಲಿದ್ದ ಒಂಟಿ ಮಹಿಳೆ ಕಮಲಮ್ಮ(57) ಎಂಬವರ ಕೊಲೆ ಆಗಿತ್ತು. ಮನೆಯ ಅಡುಗೆಮನೆಯಲ್ಲಿ ಮಹಿಳೆಯ ಬಾಯಿ ಮುಚ್ಚಿ ಕುತ್ತಿಗೆ ಭಾಗ ಸೀಳಿ ಕೊಲೆ ಮಾಡಲಾಗಿತ್ತು. ಇದು ಇಲ್ಲಿನ ನಾಗರಿಕರನ್ನು ಬೆಚ್ಚಿ ಬೀಳಿಸಿತ್ತು. ಕೊಲೆ ಮಾಡಿ ಪರಾರಿಯಾಗಿದ್ದ ಅವರ ಕಾರು ಚಾಲಕ ಹನುಮಂತ ನಾಯ್ಕ ಹಾಗೂ ಆತನ 7 ಜನ ಸ್ನೇಹಿತರನ್ನ ಬಂಧಿಸಲಾಗಿದೆ.
ಕಾರು ಚಾಲಕ ಹನುಮಂತನಾಯ್ಕ ತನ್ನ ಸಹಚರರಾದ ಪ್ರದೀಪ್, ಅಪ್ಪುನಾಯ್ಕ, ಪ್ರಭು ನಾಯ್ಕ, ಸತೀಶ್, ರಾಜು ಹಾಗೂ ಕಾರು ನೀಡಿದ್ದ ಕೌಶಿಕ್ ಎಂಬವರ ಜತೆ ಸೇರಿ ಸ್ಕೆಚ್ ರೂಪಿಸಿ, ಕೊಲೆ ಮಾಡಿದ್ದಷ್ಟೇ ಅಲ್ಲದೇ, ಮನೆಯಲ್ಲಿದ್ದ 35 ಲಕ್ಷ ರೂ. ದೋಚಿ ಪರಾರಿಯಾಗಿದ್ದ. ಕೊಲೆಯಾದ ಮಹಿಳೆಯ ಪತಿ ಮಲ್ಲಿಕಾರ್ಜುನ್ ಹೊಸದುರ್ಗದಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಆಗಿದ್ದು, ಸ್ನೇಹಿತರೊಂದಿಗೆ ಗೋವಾಗೆ ಟ್ರಿಪ್‌ ತೆರಳಿದ್ದರು. ಅವರು ಇದೇ ಕಾರು ಚಾಲಕನ ಸಹಾಯದಿಂದ ಮಗನ ಮೆಡಿಕಲ್ ವ್ಯಾಸಂಗ ಮತ್ತು ಪರೀಕ್ಷೆಗಾಗಿ 35 ಲಕ್ಷ ರೂ. ಜೋಡಿಸಿಟ್ಟಿದ್ದರು. ಈ ಹಣದ ಮೇಲೆ ಕಣ್ಣು ಹಾಕಿದ್ದ ಹನುಮಂತ ನಾಯ್ಕ, ತನ್ನ ಸಹಚರರೊಂದಿಗೆ ಸೇರಿಕೊಂಡು ಜೂ.16ರಂದು ಬಂದು ಕಮಲಮ್ಮರ ಬಳಿ ಕಾರಣ ಹೇಳಿ 3 ಸಾವಿರ ರೂ. ಹಣ ಕೇಳಿದ್ದ. ಆ ದಿನ ದೂರವಾಣಿಯಲ್ಲಿಯೇ ನಾನಿಲ್ಲದೇ ಇದ್ದಾಗ ಬಂದು ಹಣ ಕೇಳಬೇಡ ಎಂದು ಮಲ್ಲಿಕಾರ್ಜುನ್ ಗದರಿಸಿದ್ದು, ಹನುಮಂತ ನಾಯ್ಕ ವಾಪಾಸ್ ತೆರಳಿದ್ದ.
ಜೂ.17ರಂದು ಮಧ್ಯಾಹ್ನ ಸ್ಕೆಚ್ ಹಾಕಿಕೊಂಡು ಮನೆಗೆ ಬಂದ ಹನುಮಂತ ನಾಯ್ಕ್ ಮತ್ತೆ ಹಣ ಕೇಳಿದ್ದಾನೆ. ಈ ವೇಳೆ ಜತೆಗಿದ್ದ ಆರೋಪಿಯೊಬ್ಬ ಕಮಲಮ್ಮಗೆ ನೀರು ತರಲು ಹೇಳಿದ್ದು, ಅಡುಗೆ ಮನೆಗೆ ತೆರಳಿದ್ದ ಕಮಲಮ್ಮನ ಹಿಂಬದಿಯಿಂದ ಹೋಗಿ, ಬಾಯಿ ಮುಚ್ಚಿ ಕೊಲೆ ಮಾಡಿದ್ದರು. ಬಿಡಿಸಿಕೊಳ್ಳಲು ಯತ್ನಿಸಿದ್ದ ಕಮಲಮ್ಮಗೆ ಕಾಯಿ ಸುಲಿಯುವ ರಾಡಿನಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು. ಬಳಿಕ ಬೀರುವಿನಲ್ಲಿದ್ದ 35 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.
ಹನುಮಂತ ನಾಯ್ಕ ಕಳೆದೊಂದು ವರ್ಷದಿಂದ ಮಲ್ಲಿಕಾರ್ಜುನ್ ಅವರ ಬಳಿ ಖಾಸಗಿ ಕಾರಿಗೆ ಚಾಲಕನಾಗಿ ನಂಬಿಕೆ ಗಳಿಸಿದ್ದ. ಹೀಗಾಗಿಯೇ ಹಣದ ವ್ಯವಹಾರವನ್ನು ಚಾಲಕನ ಕೈಯಲ್ಲಿಯೇ ಮಲ್ಲಿಕಾರ್ಜುನ ಮಾಡುತ್ತಿದ್ದರು.

















































error: Content is protected !!
Scroll to Top