ಸುಳ್ಯದಲ್ಲಿ ಬೈಕ್‌ಗೆ ಮೈಕ್ ಕಟ್ಟಿ ಬಹಿರಂಗವಾಗಿ ಎಚ್ಚರಿಕೆ ನೀಡಿದ ಎನ್‌ಐಎ ಕೋರ್ಟ್ ಸಿಬ್ಬಂದಿ
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿಗಳ ಮನೆ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಎಚ್ಚರಿಸಿದೆ.
ಹತ್ಯೆ ಆರೋಪಿಗಳಿಗೆ ಜೂನ್ 30ರೊಳಗೆ ಎನ್‌ಐಎ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚನೆ ನೀಡಲಾಗಿದ್ದು, ಶರಣಾಗದಿದ್ದರೆ ಆರೋಪಿಗಳ ಮನೆಯಲ್ಲಿರುವ ಎಲ್ಲ ಸೊತ್ತುಗಳನ್ನು ಜಪ್ತಿ ಮಾಡಲಾಗುವುದು ಎಂದು ಸುಳ್ಯದಲ್ಲಿ ಬುಧವಾರ ಬೈಕ್‌ಗೆ ಮೈಕ್ ಕಟ್ಟಿ ಬಹಿರಂಗವಾಗಿ ಸಾರಲಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನ ಘೋಷಿಸಲಾಗಿದೆ. ಈ ಪ್ರಕರಣದ ಇನ್ನೋ ಐವರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರಿಗಗಿ ಶೋಧ ಮುಂದುವರಿದಿದೆ. ಆರೋಪಿಗಳ ಮನೆ ಬಾಗಿಲಿಗೆ ಎಚ್ಚರಿಕೆಯ ನೋಟಿಸ್ ಅಂಟಿಸಿದ ಬಳಿಕ ಎನ್‌ಐಎ ಮನೆ ಜಪ್ತಿ ಮಾಡುವುದಾಗಿ ಸಾರ್ವಜನಿಕ ಡಂಗೂರ ಸಾರಿದೆ. ಏನ್‌ಐಎ ನ್ಯಾಯಾಲಯದ ಅಧಿಕಾರಿಗಳು ಸುಳ್ಯದ ಕಲ್ಲುಮುಟ್ಲುವಿನ ಉಮ್ಮರ್ ಫಾರೂಕ್ ಹಾಗೂ ಮುಸ್ತಾಫ್ ನಿವಾಸಕ್ಕೆ ಈ ಕುರಿತಾದ ನೋಟಿಸ್ ಅಂಟಿಸಿದ್ದು ಆರೋಪಿಗಳಿಗೆ ಶರಣಾಗಲು ಿನ್ನು ಉಳಿದಿರುವುದು ಒಂದೇ ದಿನ.
ಕಳೆದ ವರ್ಷ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ನೆಟ್ಟಾರು ಕೊಲೆ ಕೇಸ್ನಲ್ಲಿ ಇದುವರೆಗೆ 21 ಅರೋಪಿಗಳನ್ನು ಎನ್‌ಐಎ ಬಂಧಿಸಿ, ಆರೋಪಿಗಳ ವಿರುದ್ದ ಚಾರ್ಜ್ಶೀಟ್ ಸಲ್ಲಿಸಿತ್ತು. ಅದರ ಮುಂದಿನ ಭಾಗವಾಗಿ ಮತ್ತೆ ಇಬ್ಬರು ಅರೋಪಿಗಳಾದ ತುಫೈಲ್ ಎಂ.ಎಚ್ ಮತ್ತು ಮಹಮ್ಮದ್ ಜಬೀರ್ ವಿರುದ್ಧ ಪೂರಕ ಚಾರ್ಜ್ರ್ಶೀಟ್ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ಶೋಧ ಮುಂದವರಿಸಿದ್ದಾರೆ. ನಿನ್ನೆ ಏಕಕಾಲಕ್ಕೆ 6 ಕಡೆಗಳಲ್ಲಿ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ನಿಷೇಧಿತ ಪಿಎಫ್ಐ ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ಎನ್ ಐಎ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.






























































