ಕಗ್ಗದ ಸಂದೇಶ-ಮುಳ್ಳಿರದೆಯೆ ಹೂವಿದೆಯೆ? ನೋವಿರದೆ ಬದುಕಿದೆಯೇ…

ವೈವಿಧ್ಯವೊಂದು ಕೃಪೆ ನಮಗಿರುವ ಕಷ್ಟದಲಿ|
ಆವರಿಸದಳಲ್ ಎಲ್ಲರುನುಮೊಂದೆ ಸಮಯ||
ನೋವಿಲ್ಲದವರು ನೋವಿರುವರನು ಸಂತಯಿಸುತಿರೆ|
ಜೀವನವು ಕಡಿದಹುದೆ? ಮಂಕುತಿಮ್ಮ||

ಜಗತ್ತಿನಲ್ಲಿ ಕಂಡುಬರುವ ವೈವಿಧ್ಯತೆ ಎನ್ನುವುದು ದೇವರು ನಮಗೆ ಅನುಗ್ರಹಿಸಿದ ಒಂದು ವಿಶೇಷ ವರ. ಎಲ್ಲರಿಗೂ ಕಷ್ಟ ಒಂದೇ ಸಮಯದಲ್ಲಿ ಬರುವುದಿಲ್ಲ. ನೋವಿಲ್ಲದವರು. ದುಃಖ ಇಲ್ಲದವರು ನೋವಿನಲ್ಲಿ ಇರುವವರನ್ನು ಸಮಾಧಾನ ಮಾಡಬೇಕು. ಹೀಗೆ ಒಬ್ಬರನೊಬ್ಬರು ಅರಿತು ಕಷ್ಟಸುಖವನ್ನು ಹಂಚಿಕೊಂಡಾಗ ಜೀವನವು ಕಷ್ಟವಾಗುವುದಿಲ್ಲ ಎಂದು ಮಾನ್ಯ ಡಿವಿಜಿಯವರು ಈ ಮುಕ್ತಕದಲ್ಲಿ ಹೇಳಿದ್ದಾರೆ.
“ಮುಳ್ಳಿರದೆಯೆ ಹೂವಿದೆಯೆ? ನೋವಿರದೆ ಬದುಕಿದೆಯೇ?” ಎಂಬ ಕವಿವಾಣಿಯಂತೆ ನೋವು ಮತ್ತು ನಲಿವು ಎಲ್ಲರ ಬದುಕಿನಲ್ಲಿಯೂ ಸರ್ವೇ ಸಾಮಾನ್ಯ. ತಮ್ಮ ನೋವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡಾಗ ಅದರ ಭಾರ ಸ್ವಲ್ಪ ಕಡಿಮೆಯಾಗುತ್ತದೆ. ನೋವನ್ನು ಅನುಭವಿಸುತ್ತಿರುವವರಿಗೆ ಯಾರಾದರೂ ಸ್ವಂದಿಸಿ ಸಾಂತ್ವನ ಮಾಡಿದಾಗ ಸ್ವಲ್ಪ ನಿರಾಳ ಉಂಟಾಗುವುದು ಮಾತ್ರವಲ್ಲ ಬದುಕಿನಲ್ಲಿ ಅವರಿಗೆ ಭರವಸೆ ಮೂಡುತ್ತದೆ. ‘ನಮ್ಮ ನೋವು ನಮಗೆ ಅರ್ಥವಾದರೆ ನಾವು ಜೀವದಿಂದ ಇದ್ದೇವೆ ಎಂದರ್ಥ; ಇತರರ ನೋವು ನಮಗೆ ಅರ್ಥವಾದರೆ ನಾವು ಮನುಷ್ಯರಾಗಿದ್ದೇವೆ ಎಂದರ್ಥವಂತೆ” ಅದಕ್ಕೆ ಡಿವಿಜಿ ಯವರು ‘ನೋವಿಲ್ಲದವರು ನೋವಿರುವವರನ್ನು ಸಮಾಧಾನ ಪಡಿಸಿದರೆ ಜೀವನ ಬಹಳ ಸುಲಭವಾಗುತ್ತದೆ ಮಾತ್ರವಲ್ಲ ಸಾರ್ಥಕವಾಗುತ್ತದೆ ಎಂದಿದ್ದಾರೆ.

ಸೃಷ್ಟಿಯಲ್ಲಿರುವ ವೈವಿಧ್ಯತೆಯೆನ್ನುವುದು ಮಾನವನ ಬದುಕಿಗೆ ಸೃಷ್ಟಿಕರ್ತನ ದೊಡ್ಡ ಅನುಗ್ರಹ. ಎಲ್ಲರಿಗೂ ಒಂದೇ ಸಮಯದಲ್ಲಿ ಕಷ್ಟಗಳು ಬಂದರೆ ಪರಸ್ಪರ ಸಹಾಯ ಮಾಡಲು ಯಾರೂ ಇರುವುದಿಲ್ಲ. ಹಾಗಾಗಿ ಜಗತ್ತಿನಲ್ಲಿ ಇರುವ ಎಲ್ಲರಿಗೂ ಒಂದೇ ಸಮಯದಲ್ಲಿ ದುಃಖ ಆವರಿಸುವುದಿಲ್ಲ. ಯಾಕೆಂದರೆ ನೋವಿನಲ್ಲಿರುವವರನ್ನು ಸಂತೈಸುವವರು ಬೇಕಲ್ಲವೆ? ಸೃಷ್ಟಿಯ ಈ ಸಂದೇಶವನ್ನು ಅರ್ಥೈಸಿಕೊಂಡು ನಡೆದರೆ ಸಮಾಜ ಎಷ್ಟು ಸುಮಧುರವಾಗಿರುತ್ತದೆ ಅಲ್ಲವೆ?. ‘ಕೂಡಿ ಬಾಳಿದರೆ ಸ್ವರ್ಗಸುಖ’ ಎನ್ನುವುದಕ್ಕೆ ಸಾಕ್ಷಿಯಾಗಿ ಪರಸ್ಪರ ಭಾವನೆಗಳಿಗೆ ಮುಕ್ತವಾಗಿ ಸ್ವಂದಿಸಿ ನೆರೆವಾದಾಗಲೇ ಮಾನವನ ಜೀವನ ಸಾರ್ಥಕವಾಗುವುದಲ್ಲವೆ?
ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಕಸಾಪ ಕಾರ್ಕಳ ತಾಲೂಕು ಘಟಕ ಅಧ್ಯಕ್ಷರು

















































error: Content is protected !!
Scroll to Top