ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿ
ಬೆಂಗಳೂರು : ಮಾತೆತ್ತಿದರೇ 13 ಬಜೆಟ್ ಮಂಡಿಸಿದ್ದೇನೆ ಎಂದು ಬೀಗುವ ಸ್ವಯಂಘೋಷಿತ ಆರ್ಥಿಕ ತಜ್ಞರಿಗೆ ಗ್ಯಾರಂಟಿಗಳನ್ನು ಈಡೇರಿಸಲು ಸಂಪನ್ಮೂಲವನ್ನು ಹೇಗೆ ಕ್ರೋಢೀಕರಣಗೊಳಿಸುವುದು ಎಂಬ ಸಣ್ಣ ಅಂಶ ಗಮನಕ್ಕೆ ಬಂದಿರಲಿಲ್ಲವೇ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಈ ಮೂಲಕ ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಆರೋಪ ಮಾಡಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಡವರ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಲ್ಪವೂ ಕಾಳಜಿ ಇಲ್ಲ. ಬಡವರಿಗೆ ಆಸೆ – ಆಮಿಷಗಳನ್ನು ಒಡ್ಡಿ, ಈಗ ಅಧಿಕಾರಕ್ಕೆ ಬಂದ ನಂತರ, ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದೇ ಇದ್ದಾಗ ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಯಾವುದೇ ಇತರ ಖರ್ಚುಗಳನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸದೇ, 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಡಿಸೆಂಬರ್ನಿಂದ ಗರೀಬ್ ಕಲ್ಯಾಣ್ ಯೋಜನೆಯಡಿ ಕೇಂದ್ರ ಸರಕಾರವು 10 ಕೆ.ಜಿ ಅಕ್ಕಿಯನ್ನು ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯ ಸರಕಾರದ ಬೊಕ್ಕಸದಿಂದ ಹಣ ಹೊಂದಿಸಿ, 1 ಕೆಜಿ ಅಕ್ಕಿಯನ್ನು ಖರೀದಿಸುವ ವೇಳೆಯಲ್ಲಿಯೂ ಸಹ ಭಾರತೀಯ ಆಹಾರ ನಿಗಮ ಈ ಬಗ್ಗೆ ನಿಬಂಧನೆ ಇದೆ ಎಂದು ನಮಗೆ ತಿಳಿಸಿತ್ತು. ಆ ಬಳಿಕ ಈ ಬಗ್ಗೆ ಕಡತದಲ್ಲಿ ನಾನು ಸವಿವರವಾಗಿ ನಮೂದಿಸಿದ್ದು, ಏಪ್ರಿಲ್, ಮೇ, ಜೂನ್, ಜುಲೈಗೆ ಹೆಚ್ಚುವರಿ ಅಕ್ಕಿಯನ್ನು ಟೆಂಡರ್ ಮುಖಾಂತರ ಬೇರೆ ಆಹಾರ ನಿಗಮಗಳಿಂದಾದರೂ ಸಹ ಖರೀದಿಸಬೇಕು, ಕೇವಲ ಎಫ್ಸಿಐ ಮೇಲೆ ಅವಲಂಬಿತರಾಗಬಾರದು ಎಂದು ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೆ ಎಂದು ಹೇಳಿದ್ದಾರೆ.
ಈ ಸರಕಾರಕ್ಕೆ ನುಡಿದಂತೆ ನಡೆಯಲು ಇಷ್ಟವಿಲ್ಲ!
ಹೊಸ ಸರಕಾರ ರಚನೆಯಾದ ಮೊದಲ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರಯ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿ, ಅಧಿಕಾರಿಗಳೊಂದಿಗೆ ಅನೇಕ ಸರಣಿ ಸಭೆ ನಡೆಸಿದರು. ಅಂದೇ ಅಧಿಕಾರಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ತಿಳಿಹೇಳಬಹುದಿತ್ತಲ್ವಾ? ಕೊನೆ ಪಕ್ಷ ಟೆಂಡರ್ ಸಹ ಕರೆಯಲಿಲ್ಲ, ಕೇಂದ್ರ ಸರಕಾರದೊಂದಿಗೆ ಸಂಪರ್ಕ ಸಹ ನಡೆಸದೇ, ಕೇವಲ ಎಫ್ಸಿಐನೊಂದಿಗೆ ಸಂವಹನ ನಡೆಸಿರುವುದನ್ನು ಗಮನಿಸಿದರೇ, ಈ ಸರಕಾರಕ್ಕೆ ನುಡಿದಂತೆ ನಡೆಯಲು, ಜನರಿಗೆ ಅಕ್ಕಿ ಕೊಡಲು ಇಷ್ಟವಿಲ್ಲ ಎಂಬುದು ಸಾಬೀತಾಗುತ್ತದೆ. ಅಕ್ಕಿ ಕೊಡುವ ದಿನ ಹತ್ತಿರ ಬಂದ ಕಾರಣ, ಈಗ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಿ, ತಮ್ಮ ತಪ್ಪನ್ನು ಸಾರ್ವಜನಿಕರೆದುರು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಕೂಡಲೇ ಸಿದ್ದರಾಮಯ್ಯನವರು ವಿವಿಧ ಆಹಾರ ನಿಗಮಗಳನ್ನು ಸಂಪರ್ಕಿಸಿ ಮಾತು ತಪ್ಪದಂತೆ, ಸಾರ್ವಜನಿಕರಿಗೆ 10 ಕೆಜಿ ಅಕ್ಕಿಯನ್ನು ನೀಡಬೇಕು. ಒಂದು ವೇಳೆ ಅಕ್ಕಿ ನೀಡಲು ಆಗದಿದ್ದರೇ, ಎಲ್ಲಾ ಕುಟುಂಬಗಳಿಗೆ ಡಿಬಿಟಿ ಮೂಲಕ 10 ಕೆಜಿ ಅಕ್ಕಿಯ ಬದಲು ಹಣವನ್ನು ನೀಡಬೇಕು. ನಮ್ಮ ಬಳಿ ಡಿಬಿಟಿ ಮೂಲಕ ಹಣ ಪಾವತಿಸಲು ಎಲ್ಲಾ ಅಗತ್ಯ ದತ್ತಾಂಶಗಳು ಸಹ ಇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
10 ಕೆಜಿ ಅಕ್ಕಿ ನೀಡದಿದ್ದಲ್ಲಿ ಹೋರಾಟದ ಎಚ್ಚರಿಕೆ!
ಇಂಧನ ದರ ಏರಿಕೆಯನ್ನು ಹಿಂದಿನ ಸರ್ಕಾರ ಮಾಡಿದೆ ಎಂದು ಸಿದ್ದರಾಮಯ್ಯ ಸುಳ್ಳು ಹೇಳಿ ಜನರನ್ನು ವಂಚಿಸುತ್ತಿದ್ದಾರೆ. ಇಂಧನ ದರ ಏರಿಕೆಯ ಬಗ್ಗೆ ಜೂನ್ 02 ರಂದು ಅಧಿಕೃತ ಆದೇಶ ಹೊರ ಬಂದಿದೆ. ಜೂನ್ 02ನೇ ತಾರೀಖು ಯಾರ ಸರಕಾರ ಇತ್ತು ಎಂಬುದನ್ನು ರಾಜ್ಯದ ಜನತೆ ಗಮನಿಸಬೇಕು. ಜೂನ್ ತಿಂಗಳಲ್ಲಿ ಸರ್ಕಾರ 10 ಕೆಜಿ ಪಡಿತರವನ್ನು ಒದಗಿಸದೇ ಇದ್ದಲ್ಲಿ, ನಾವು ರಾಜ್ಯವ್ಯಾಪಿ ಹೋರಾಟವನ್ನು ನಡೆಸುತ್ತೇವೆ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು, ಈಗ ಭರವಸೆಗಳನ್ನು ಈಡೇರಿಸಲು ಆಗದೇ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುವ ಈ ಸರ್ಕಾರಕ್ಕೆ ಕೆಲವೇ ದಿನಗಳಲ್ಲಿ ಜನತೆ ಹಿಡಿಶಾಪ ಹಾಕಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.





































