ಸಿಡಿಲಿನಿಂದ ರಕ್ಷಣೆ ಹೇಗೆ ?
ಮುನ್ಸೂಚನೆ ನೀಡುವ ಸಿಡಿಲು ಆ್ಯಪ್
ವರದಿ : ನಳಿನಿ ಎಸ್. ಸುವರ್ಣ

ಕಾರ್ಕಳ : ಮಳೆಗಾಲ ಆರಂಭವಾಗುತ್ತಿದ್ದಂತೆ ಸಿಡಿಲು ಮಿಂಚಿನ ಅಬ್ಬರಕ್ಕೆ ಜನತೆ ಭಯಭೀತಿಗೊಳ್ಳುವಂತಾಗಿದೆ. ಸಿಡಿಲಿನ ಆರ್ಭಟಕ್ಕೆ ಪ್ರತಿವರ್ಷ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗುತ್ತಿದೆ. ಇನ್ನು ಕಲ್ಲಿನಿಂದಲೇ ಆವೃತ್ತವಾಗಿರುವ ಕಾರ್ಕಳದಲ್ಲಿ ಸಿಡಿಲಿನ ಆರ್ಭಟವೂ ಜೋರಾಗಿಯೇ ಇದ್ದು ಹಲವೆಡೆ ಸಿಡಿಲು ಬಡಿದಿದೆ. ಹೀಗಾಗಿ ಕಾರ್ಕಳವನ್ನು ಸಿಡಿಲಿನ ಹೊಡೆತದಿಂದ ರಕ್ಷಿಸುವ ನಿಟ್ಟಿನಲ್ಲಿ ಮಿಂಚು ಬಂಧಕ ಅಳವಡಿಸುವುದು ಅನಿವಾರ್ಯವಾಗಿದೆ.
ಸಿಡಿಲಿನ ಆಘಾತಕ್ಕೀಡಾಗುವ ಪರಿಸರ
15 ಮೀ. ಗಿಂತ ಹೆಚ್ಚು ಎತ್ತರವಿರುವ ಗೋಪುರ, ಎತ್ತರದ ಕಟ್ಟಡ, ತೆಂಗಿನ ಮರ, ಕಂಬಗಳಿಗೆ ಹೆಚ್ಚಾಗಿ ಮಿಂಚು ಬಡಿಯುವುದು ಸಾಮಾನ್ಯ. ಮಿಂಚು ಬಂಧಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.
ಕಾರ್ಕಳ ತಾಲೂಕಿನಲ್ಲಿ ಬಜಗೋಳಿ, ಈದು ನೂರಾಲ್ ಬೆಟ್ಟು, ಮಿಯ್ಯಾರು, ನಿಟ್ಟೆ ಹಾಗೂ ಬೈಲೂರು ಸೇರಿದಂತೆ ಕಲ್ಲಿನಿಂದ ಆವೃತವಾದ ಪ್ರದೇಶದಲ್ಲಿ ಪ್ರತಿವರ್ಷವೂ ಸಿಡಿಲಿನ ಅಬ್ಬರ ಹೆಚ್ಚಾಗಿರುತ್ತದೆ. ಈ ಪ್ರದೇಶಗಳಲ್ಲಿ ಅವಶ್ಯವಾಗಿ ಮಿಂಚು ಬಂಧಕ ಅಳವಡಿಕೆಯಾಗಬೇಕಿದೆ. ಕಳೆದ ವರ್ಷ ಈದು ನೂರಲ್ ಬೆಟ್ಟುವಿನಲ್ಲಿ ಜಿಗೇಶ್ ಜೈನ್ ಸಿಡಿಲಿನ ಹೊಡತಕ್ಕೆ ಬಲಿಯಾಗಿದ್ದರು.
ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದಡಿ ಜಿಲ್ಲಾಡಳಿತಗಳು ಮಿಂಚು ಪ್ರತಿಬಂಧಕ ಅಳವಡಿಸಲು ಮುಂಜೂರಾತಿ ನೀಡುತ್ತಿದ್ದು, ಅದರಂತೆ ತಂತ್ರಜ್ಞರ ಸಲಹೆ ಪಡೆದುಕೊಂಡು ಸಿಡಿಲಿನ ಅಘಾತದಿಂದ ಹಾನಿ ಪ್ರಮಾಣ ಆಧರಿಸಿ ಸ್ಥಳ ಗುರುತಿಸಲಾಗುತ್ತದೆ. ಸಿಡಿಲಿನ ಹೊಡೆತವನ್ನು ತಪ್ಪಿಸುವ ನಿಟ್ಟಿನಲ್ಲಿ ಎತ್ತರದ ಸ್ಥಳಗಳಲ್ಲಿ ಟವರ್ ನಿರ್ಮಿಸಿ ಮಿಂಚು ಪ್ರತಿಬಂಧಕ ಅಳವಡಿಸಲಾಗುತ್ತಿದೆ.
ಕಣಂಜಾರು ಕಡ್ತಲದಲ್ಲಿ ಅಳವಡಿಕೆ
ಸರಕಾರದ ವತಿಯಿಂದ 5 ವರ್ಷಗಳ ಹಿಂದೆ ಕಣಂಜಾರಿನ ಮಡಿಬೆಟ್ಟು ಶಾಲೆಯ ಸಮೀಪ ಮಿಂಚು ಬಂಧಕವನ್ನು ಅಳವಡಿಸಲಾಗಿದ್ದು, ಇಂದಿಗೂ ಸುಸ್ಥಿತಿಯಲ್ಲಿದೆ. ಈ ಮಿಂಚು ಬಂಧಕ ಅಳವಡಿಕೆಯ ಬಳಿಕ ಈ ಪ್ರದೇಶದಲ್ಲಿ ಸಿಡಿಲು ಬಡಿತದ ಪ್ರಮಾಣ ಕಡಿಮೆಯಾಗಿದೆ. ಕಡ್ತಲದ ಚೆನ್ನಿಬೆಟ್ಟು ಪ್ರದೇಶದಲ್ಲೂ ಮಿಂಚು ಬಂಧಕ ಅಳವಡಿಸಲಾಗಿತ್ತು. ಅವುಗಳನ್ನು ಹೊರತುಪಡಿಸಿದಲ್ಲಿ ಮತ್ತೆಲ್ಲೂ ಕಾರ್ಕಳದಲ್ಲಿ ಮಿಂಚು ಬಂಧಕ ಅಳವಡಿಸುವ ಕಾರ್ಯವಾಗಿಲ್ಲ.
ವಿಶ್ವವಿಖ್ಯಾತ ಗೋಮಟೇಶ್ವರ ಬೆಟ್ಟ, ಕೋಟಿ ಚೆನ್ನಯ ಥೀಮ್ ಪಾರ್ಕ್, ಕೋರ್ಟ್ ಕಟ್ಟಡ ಸೇರಿದಂತೆ ಕೆಲವೆಡೆ ಖಾಸಗಿಯಾಗಿ ಮಿಂಚು ಬಂಧಕವನ್ನು ಅಳವಡಿಸಲಾಗಿದೆ.
ಮಿಂಚು ಬಂಧಕ
ಮಿಂಚು ಮತ್ತು ಸಿಡಿಲಿನ ಹೊಡೆತಗಳು 30 ಸಾವಿರ ಫ್ಯಾರನ್ ಹೀಟ್ನಿಂದ 50 ಸಾವಿರ ಫ್ಯಾರನ್ ಹೀಟ್ ಹೊರಚೆಲ್ಲುವುದು. ಇದು ಸೂರ್ಯನ ಮೇಲ್ಮೆ ತಾಪಮಾನಕ್ಕಿಂತಲೂ ಹೆಚ್ಚು. ದೊಡ್ಡ ಕಟ್ಟಡಗಳನ್ನು ಈ ಸಿಡಿಲಿನ ಹೊಡೆತದಿಂದ ರಕ್ಷಿಸಲು ತ್ರಿಶೂಲಾಕಾರದ ಲೋಹದ ಸಲಾಕೆಯನ್ನು ಕಟ್ಟಡದ ಮೇಲೆ ಅಳವಡಿಸಿ ಅದರ ಕೆಳತುದಿಯನ್ನು ಒಂದು ವಾಹಕದ ಮೂಲಕ ಭೂಮಿಗೆ ಸೇರಿಸುತ್ತಾರೆ. ಇದೇ ಮಿಂಚು ಬಂಧಕ. ಸಿಡಿಲು ಮೋಡದಿಂದ ಪ್ರೇರೇಪಿತಗೊಂಡ ವಿದ್ಯುತ್ ಅಂಶಗಳು ಮಿಂಚು ಬಂಧಕ ಹಾಗೂ ವಾಹಕಗಳ ಮೂಲಕ ಭೂಮಿಯನ್ನು ಸೇರಿ ಸಿಡಿಲಿನ ಅಪಾಯ, ಅನಾಹುತವನ್ನು ತಪ್ಪಿಸುವುದು.
ಸಿಡಿಲು ಆ್ಯಪ್ ಬಳಸಿ ಅಪಾಯದಿಂದ ಪಾರಾಗಿ
ಕಳೆದ ವರ್ಷ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸಿಡಿಲಿನ ಮುನ್ಸೂಚನೆ ಪಡೆಯಲು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಸಿಡಿಲು ಆ್ಯಪ್ ನ್ನು ಬಿಡುಗಡೆಗೊಳಿಸಿತ್ತು. ಈ ಆ್ಯಪ್ ಮೂಲಕ ಸಿಡಿಲಿನ ಮುನ್ಸೂಚನೆಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾಧಿಕಾರವು ಪ್ರಕಟನೆಯೊಂದನ್ನು ಹೊರಡಿಸಿತ್ತು.
ಬಳಕೆ ಹೇಗೆ ?
ಮೊಬೈಲ್ನಲ್ಲಿ ಪ್ಲೇ-ಸ್ಟೋರ್ ಮೂಲಕ ಸಿಡಿಲು (Sidilu App) ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಇನ್ಸ್ಟಾಲ್ ಮಾಡಿದ ಸಿಡಿಲು ಆ್ಯಪ್ ಓಪನ್ ಮಾಡಿ, ಲೊಕೇಶನ್ ಬಳಸಲು ಅನುವು ಮಾಡಿಕೊಡಬೇಕು. ಆಗ ಲೊಕೇಶನ್ ತೋರಿಸುತ್ತದೆ. ಅಲ್ಲಿ ನಿಮ್ಮ ಪ್ರದೇಶದಲ್ಲಿ ಸಿಡಿಲು, ಗುಡುಗು ಅಥವಾ ಮಳೆ ಬೀಳುವ ಸಂಭವವಿದ್ದಲ್ಲಿ ಆ ಪ್ರದೇಶದ ಮೇಲೆ ಚಿನ್ಹೆಗಳು ಮೂಡುತ್ತದೆ. ಒಂದು ವೇಳೆ ನಿಮ್ಮ ಪ್ರದೇಶದ ಸುತ್ತಮುತ್ತ ಸಿಡಿಲಿನ ಮುನ್ಸೂಚನೆ ಇಲ್ಲದಿದ್ದಲ್ಲಿ ಖಾಲಿಯಾಗಿರುತ್ತದೆ. ನೋ ಲೈಟ್ನಿಂಗ್ ಇನ್ ಯುವರ್ ಏರಿಯಾ (No lightning activity in your area) ಎನ್ನುವ ಸಂದೇಶ ಕಾಣಿಸುತ್ತದೆ. ಇಲ್ಲಿ ನಿಮಗೆ ಮಿಂಚು, ಗುಡುಗು, ಮಳೆ ಎನ್ನುವ ಮೂರು ಆಯ್ಕೆ ಇರಲಿದ್ದು, ನಿಮ್ಮ ಪ್ರದೇಶದಲ್ಲಿನ ಈ ಮೂರು ಮಾಹಿತಿಯನ್ನು ಈ ಆ್ಯಪ್ ಸಹಾಯದಿಂದ ಪಡೆಯಬಹುದಾಗಿದೆ.
ರಕ್ಷಣೆ ಹೇಗೆ ?
ಸಿಡಿಲನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಸಿಡಿಲಿನಿಂದ ಉಂಟಾಗುವ ಸಾವು ನೋವು ತಪ್ಪಿಸಲು ಪ್ರಯತ್ನಿಸಬಹುದು. ಆದ್ದರಿಂದ ಸಿಡಿಲು ಆ್ಯಪ್ ಬಳಸುವುದರಿಂದ ಮಾಹಿತಿ ಪಡೆದು ಅಪಾಯದಿಂದ ಪಾರಾಗಲು ಮುನ್ನೆಚರಿಕ್ಕೆ ಕ್ರಮಗಳನ್ನು ಕೈ ಗೊಳ್ಳಬಹುದು. ಸಿಡಿಲಿನ ಸಂಭವನೀಯತೆ ಇದ್ದಲ್ಲಿ ಮನೆಯಿಂದ ಹೊರಗಿನ ಕೆಲಸಗಳನ್ನು ಮುಂದೂಡಬೇಕು. ಆದಷ್ಟು ಮನೆಯಲ್ಲಿಯೇ ಇರುವುದು ಸೂಕ್ತ. ಮನೆಯ ಸುತ್ತಲಿನಲ್ಲಿರುವ ಕೊಳೆತ ಹಾಗೂ ಒಣಗಿದ ಮರಗಳನ್ನು ತೆರವುಗೊಳಿಸಬೇಕು. ಸಿಡಿಲು ಆರ್ಭಟಿಸುವಾಗ ಕಿಟಕಿಯಿಂದ ದೂರವಿರಬೇಕು, ಈ ಸಂದರ್ಭದಲ್ಲಿ ದೂರವಾಣಿ, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬಾರದು. ಗೃಹಪಯೋಗಿ ಉಪಕರಣಗಳ ಫ್ಲಗ್ಗಳನ್ನು ತೆಗೆದಿಡಬೇಕು. ಗೋಡೆಯಿಂದ ದೂರವಿರುವುದು ಉತ್ತಮ. ಒಣಮರದ ಪೀಠೋಪಕರಣಗಳು ಸುರಕ್ಷಿತವಾಗಿದ್ದು, ವಿದ್ಯುದ್ದೀಕರಣದ ಅಪಾಯ ಇರುವುದರಿಂದ ಸಿಡಿಲಿನ ಸಂದರ್ಭದಲ್ಲಿ ಪಾತ್ರೆ ತೊಳೆಯುವುದು ಹಾಗೂ ನೀರಿನೊಂದಿಗಿನ ಕೆಲಸವನ್ನು ಮಾಡಬಾರದು. ಮನೆಯ ಹೊರಗಿದ್ದರೆ ಸಿಡಿಲು ಬರುವ ಲಕ್ಷಣಗಳಿದ್ದಲ್ಲಿ ತಕ್ಷಣ ಸುರಕ್ಷಿತ ಕಟ್ಟಡಗಳ ಒಳಗೆ ಸೇರಿಕೊಳ್ಳಬೇಕು. ಎತ್ತರ ಪ್ರದೇಶದಲ್ಲಿ ಸಿಡಿಲಿನ ಪ್ರಭಾವ ಅಧಿಕವಾಗಿರುವುದರಿಂದ ತಗ್ಗು ಪ್ರದೇಶಗಳಿಗೆ ತೆರಳಬೇಕು. ವಾಹನ ಚಲಿಸುವ ಸಂದರ್ಭದಲ್ಲಿ ಸಿಡಿಲು ಬಂದಾಗ ಮರ ಹಾಗೂ ತಂತಿ ಕಂಬಗಳಿಂದ ವಾಹನವನ್ನು ದೂರ ನಿಲ್ಲಿಸಿ, ವಾಹನದೊಳಗೆ ಇರುವುದು ಸೂಕ್ತ. ಬಸ್ಗಳಲ್ಲಿ ಪ್ರಯಾಣಿಸುವಾಗ ಕಿಟಕಿಗಳ ಗಾಜನ್ನು ಮುಚ್ಚಬೇಕು. ಕಾಡಿನಲ್ಲಿದ್ದ ಸಂದರ್ಭದಲ್ಲಿ ಕಡಿಮೆ ಮರಗಳಿರುವ ಪ್ರದೇಶದಲ್ಲಿ ಸಣ್ಣ ಮರದ ಕೆಳಗೆ ಆಶ್ರಯ ಪಡೆಯಬೇಕು. ಗುಂಪಿನಲ್ಲಿದ್ದಾಗ ಜನರಿಂದ ಪರಸ್ಪರ ಅಂತರವನ್ನು ಕಾಪಾಡಿಕೊಳ್ಳುವುದು ಒಳಿತು.






































