ಕೊಂದು ಏಳು ತುಂಡು ಮಾಡಿ ಚರಂಡಿಗೆ ಎಸೆದ ಪಾತಕಿಗಳು
ಧರ್ಮಶಾಲಾ: ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ 21 ವರ್ಷದ ಯುವಕನನ್ನು ಕೊಲೆ ಮಾಡಿ ಮೃತದೇಹವನ್ನು 7 ತುಂಡುಗಳಾಗಿ ಕತ್ತರಿಸಿ ಚರಂಡಿಗೆ ಎಸೆದ ಬರ್ಬರ ಘಟನೆ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.
ಮನೋಹರ್ ಲಾಲ್ ಮೃತ ದುರ್ದೈವಿ. ಈತ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ಮನೆಯ ಮೂರು ಜನರು ಸೇರಿ ಮನೋಹರ್ನನ್ನು ಥಳಿಸಿ ಬಳಿಕ ಕಲ್ಲುಗಳಿಂದ ಜಜ್ಜಿ ಕೊಲೆ ಮಾಡಿ ಮೃತದೇಹವನ್ನು 7 ತುಂಡು ಮಾಡಿ ಚರಂಡಿಗೆ ಬಿಸಾಡಿದ್ದಾರೆ.
ಜೂನ್ 6 ರಂದು ಕಾಣೆಯಾಗಿದ್ದ ಮನೋಹರ್ ಮೃತದೇಹದ ಭಾಗಗಳು ಜೂನ್ 9 ರಂದು ಚರಂಡಿಯಲ್ಲಿ ಲಭ್ಯವಾಗಿದ್ದು ಪೋಸ್ಟ್ಮಾರ್ಟಂ ಬಳಿಕ ಭೀಕರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಘಟನೆ ಸಂಬಂಧಿಸಿದಂತೆ ಯುವತಿಯ ಸಹೋದರ ಶಬ್ಬೀರ್ ಸೇರಿ 3 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರುಖ್ಸಾನಾ ಎಂಬ ಮುಸ್ಲಿಂ ಯುವತಿಯನ್ನು ಮನೋಹರ್ ಪ್ರೀತಿಸುತ್ತಿದ್ದರು. ಜೂನ್ 6 ರಂದು ಮನೋಹರ್ ಮನೆಗೆ ಹಿಂದಿರುಗುತ್ತಿದ್ದಾಗ ನಾಪತ್ತೆಯಾಗಿದ್ದರು.ಮನೆಯವರು ಆತನಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. 3 ದಿನಗಳ ನಂತರ, ಹಳ್ಳದಿಂದ ದುರ್ವಾಸನೆ ಬರುತ್ತಿರುವುದನ್ನು ಕೆಲವರು ಗಮನಿಸಿದರು. ಗೋಣಿಚೀಲದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ, ಬ್ಯಾಗ್ ಅನ್ನು ವಶಪಡಿಸಿಕೊಂಡಾಗ ಮೃತದೇಹ ಪತ್ತೆಯಾಗಿದೆ.






































