ಸಂಕಷ್ಟದಲ್ಲಿ ಜನತೆ – ಸಣ್ಣ ಕೈಗಾರಿಕೆ : ನವೀನ್ ನಾಯಕ್ ಟೀಕೆ
ಕಾರ್ಕಳ : ಚುನಾವಣೆ ಪೂರ್ವ ಕಾಂಗ್ರೆಸ್ ಮತದಾರರಿಗೆ ಉಚಿತ ಗ್ಯಾರಂಟಿಗಳ ಆಮಿಷವೊಡ್ಡಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪ್ರಸ್ತುತ ಕಾಂಗ್ರೆಸ್ ಈ ಹಿಂದೆ ನೀಡಿದ ಭರವಸೆಗಳನ್ನು ಅನುಷ್ಠಾನಗೊಳಿಸುತ್ತಿದ್ದು,ಇದಕ್ಕಾಗಿ ವಿದ್ಯುತ್ ದರದಲ್ಲಿ ಭಾರಿ ಹೆಚ್ಚಳ ಮಾಡಿದೆ. ಈ ಮೂಲಕ ಪರೋಕ್ಷವಾಗಿ ಜನರನ್ನು ಲೂಟಿ ಮಾಡಲು ಸರಕಾರ ಮುಂದಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಟೀಕಿಸಿದ್ದಾರೆ.
ಜನರಿಗೆ ಉಚಿತ ವಿದ್ಯುತ್ ನೀಡುವ ಸೋಗಿನಲ್ಲಿ ಸಣ್ಣ ಹಾಗೂ ಗುಡಿಕೈಗಾರಿಕೆಗಳಲ್ಲಿ ಬಳಕೆಯಾಗುವ ವಿದ್ಯುತ್ ದರದಲ್ಲಿ ಭಾರಿ ಏರಿಕೆಯಾಗಿದ್ದು, ಜನತೆ, ಸಣ್ಣಕೈಗಾರಿಕೆಗಳು ಅತಂತ್ರಗೊಂಡಿದ್ದಾರೆ. ವಾಣಿಜ್ಯ ಹಾಗೂ ಕೈಗಾರಿಕಾ ಬಳಕೆಯ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿರುವ ಪರಿಣಾಮ ಮೊದಲೇ ಸಂಕಷ್ಟದಲ್ಲಿರುವ ಕೈಗಾರಿಕೆಗಳಿಗೆ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಸಣ್ಣ ಕೈಗಾರಿಕೆಗಳನ್ನು ನಿರ್ವಹಣೆ ಮಾಡುವುದು ಸುಲಭವಲ್ಲ. ಕಾರ್ಮಿಕರ ವೇತನ, ನಿರ್ವಹಣಾ ವೆಚ್ಚದಿಂದಾಗಿ ಕಂಗಾಲಾಗಿರುವ ಉದ್ಯಮಗಳಿಗೆ ವಿದ್ಯುತ್ ಬೆಲೆ ಏರಿಕೆಯಿಂದ ಮತ್ತಷ್ಟು ಹೊಡೆತ ಬೀಳಲಿದೆ. ಮಾತ್ರವಲ್ಲದೇ ಉದ್ಯೋಗ ನಂಬಿರುವ ಸಾವಿರಾರು ನೌಕರರ ಬದುಕು ಬೀದಿಗೆ ಬಿದ್ದಂತಾಗುತ್ತದೆ. ಗ್ರಾಮೀಣ ಭಾಗದ ಗುಡಿ ಹಾಗೂ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕಿರುವ ಸರಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಮುಚ್ಚಲು ಮುಂದಾಗಿದೆ. ಆದ್ದರಿಂದ ಸರಕಾರ ತಕ್ಷಣವೇ ವಿದ್ಯುತ್ ಬೆಲೆ ಇಳಿಸಿ ಕೈಗಾರಿಕೆಗಳ ನೆರವಿಗೆ ಧಾವಿಸಬೇಕಿದೆ ಎಂದು ನವೀನ್ ನಾಯಕ್ ಆಗ್ರಹಿಸಿದರು.
ಕಾಂಗ್ರೆಸ್ ಗ್ಯಾರಂಟಿಗೆ ಒಂದೇ ವರ್ಷ ಗ್ಯಾರಂಟಿ
ಮುಂದಿನ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಶತಾಯಗತಾಯ 5 ಗ್ಯಾರಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಣತೊಟ್ಟಿದೆ. ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನೀಡಿರುವ ಗ್ಯಾರಂಟಿಯ ಬಣ್ಣ ಕಳಚಲಿದ್ದು, ಇದು ಕೇವಲ ಒಂದೇ ವರ್ಷ ಗ್ಯಾರಂಟಿ ಎಂದು ನವೀನ್ ನಾಯಕ್ ಭವಿಷ್ಯ ನುಡಿದರು. ಕಾಂಗ್ರೆಸ್ ಈಗಾಗಲೇ ಘೋಷಣೆ ಮಾಡಿರುವ 5 ಗ್ಯಾರಂಟಿಗಳನ್ನು ಕಾರ್ಯಗತಗೊಳಿಸಲು ಸರಕಾರ ಅಂದಾಜು ಕನಿಷ್ಟ 1 ಲಕ್ಷ ಕೋಟಿಗೂ ಮಿಕ್ಕಿ ಅನುದಾವನ್ನು ಮೀಸಲಿರಿಸಬೇಕು. ರಾಜ್ಯದ ವಾರ್ಷಿಕ ಬಜೆಟ್ ನ ಶೇ. 30ರಷ್ಟು ಪಾಲನ್ನು ಗ್ಯಾರಂಟಿಗಳಿಗೆ ವಿನಿಯೋಗಿಸಿದರೆ ಉಳಿಕೆ ಮೊತ್ತದಲ್ಲಿ ಅಭಿವೃದ್ಧಿ ಚಟುವಟಿಕೆ, ಸಚಿವರ, ಶಾಸಕರ ವೇತನ, ಸರಕಾರಿ ನೌಕರರ ವೇತನ, ಸರಕಾರದ ಸಾಲ ಮರುಪಾವತಿ ಇತ್ಯಾದಿ ಹೇಗೆ ಸಾಧ್ಯ ಎಂದು ಶ್ವೇತಪತ್ರ ಹೊರಡಿಸಬೇಕು ಎಂದು ನವೀನ್ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದರು.

ತೆರಿಗೆ ರೂಪದಲ್ಲಿ ಕಿತ್ತುಕೊಳ್ಳುತ್ತಿರುವುದು ಖಂಡನೀಯ
ವಿಷಮ ಆರ್ಥಿಕ ಪರಿಸ್ಥಿತಿಯಲ್ಲಿ ಗ್ಯಾರಂಟಿಗಳನ್ನು ಈಡೇರಿಸುವ ಶಪಥ ಮಾಡಿರುವ ಕಾಂಗ್ರೆಸ್ ಜನರಿಂದಲೇ ತೆರಿಗೆ ರೂಪದಲ್ಲಿ ಕಿತ್ತುಕೊಳ್ಳುತ್ತಿರುವುದು ಖಂಡನೀಯ. ಕಾಂಗ್ರೆಸ್ ಹೇಗಾದರೂ ಮಾಡಿ ಅಧಿಕಾರ ಪಡೆಯಬೇಕೆನ್ನುವ ಸ್ವಾರ್ಥ ಮನೋಭಾವನೆಯಿಂದ ಜನರ ಬದುಕನ್ನು ಬೀದಿಗೆ ತಳ್ಳಲು ಮುಂದಾಗಿದೆ ಎಂದು ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


























